ಬೆಂಗಳೂರು: ಅಕ್ಟೋಬರ್ 24 ರಂದು ಕನ್ನಿಕಾ ಲೇಔಟ್‌ನಲ್ಲಿರುವ ನಿವಾಸದಲ್ಲಿ ತನ್ನ ಏಳು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ದರ್ಶನ್ ಎಂಬಾತನನ್ನು ಸೋಮವಾರ (ಅಕ್ಟೋಬರ್ 27) ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಸಿರಿ ಸರ್ಕಾರಿ ಶಾಲೆಯಲ್ಲಿ 2 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ನಾಲ್ಕು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದ ನಂತರ ದರ್ಶನ್ ಪತಿಯಿಂದ ದೂರಾಗಿದ್ದ ಶಿಲ್ಪಾಳನ್ನು ಮದುವೆಯಾಗಿದ್ದ.
ಶುಕ್ರವಾರ ಸಂಜೆ ಕೆಲಸಕ್ಕೆ ಹೋಗಿದ್ದ ತಾಯಿ ಇನ್ನೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಶಾಲೆಯಿಂದ ಬಂದ ಬಾಲಕಿ ಮನೆಗೆ ಹೋಗದೆ ಪರಿಚಯಸ್ಥರ ಅಂಗಡಿ ಬಳಿ ನಿಂತಿದ್ದಳು. ಈ ವೇಳೆ ಮನೆಯಲ್ಲಿದ್ದ ದರ್ಶನ್, ಬಾಲಕಿಯನ್ನು ಹುಡುಕಿಕೊಂಡು ಬಂದಿದ್ದ.
ಅಂಗಡಿ ಬಳಿ ಇದ್ದ ಸಿರಿಯನ್ನು ಮನೆಗೆ ಕರೆದಾಗ ತಾನು ಮನೆಗೆ ಬರುವುದಿಲ್ಲವೆಂದು ಹಠ ಮಾಡಿದ್ದಳು. ಈತ ನನಗೆ ಹೊಡೆಯುತ್ತಾನೆ ಎಂದು ಎಲ್ಲರ ಎದುರು ಹೇಳಿದ್ದಳು. ಆದರೂ ದರ್ಶನ್ ಬಲವಂತವಾಗಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ.
ಸಾಕ್ಷ್ಯ ನಾಶ ಮಾಡಲು ರಕ್ತದ ಕಳೆಯನ್ನೆಲ್ಲಾ ತೊಳೆದಿದ್ದಾನೆ. ನಂತರ ಮನೆಗೆ ಬಂದ ಬಾಲಕಿಯ ತಾಯಿ ಶಿಲ್ಪಾ ಬಳಿ ಮಗು ಮಾತನಾಡುತ್ತಿಲ್ಲವೆಂದು ದರ್ಶನ್ ಹೇಳಿದ್ದ. ಆಕೆ ತನ್ನ ಮಗುವಿನ ಪರಿಸ್ಥಿತಿ ಕಂಡು ಕಿರುಚಿಕೊಂಡಿದ್ದಳು. ಇದೇ ವೇಳೆ ದರ್ಶನ್ ಶಿಲ್ಪಾಳನ್ನು ರೂಮಿನಲ್ಲಿ ಕೂಡಿಹಾಕಿ ಬೈಕ್‌ನಲ್ಲಿ ಪರಾರಿಯಾಗಿದ್ದವನು ಈಗ ಕುಂಬಳಗೋಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸಿಸಿಟಿವಿ ದೃಶ್ಯಾವಳಿಗಳು, ಪುರಾವೆಗಳನ್ನು ವಿಶ್ಲೇಷಿಸಿದ ನಂತರ, ಆರೋಪಿಯನ್ನು ತುಮಕೂರು ಜಿಲ್ಲೆಯಲ್ಲಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗಳ ಜೀವನದಲ್ಲಿ ಅವಳು ಹಸ್ತಕ್ಷೇಪ ಮಾಡುತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ.

































