ಮಂಗಳೂರು: ಕಂಪನಿ ತೆರೆಯಲೆಂದು ಸುಳ್ಳು ದಾಖಲಾತಿ ಸೃಷ್ಟಿಸಿ ಸಾಲದ ಹೆಸರಿನಲ್ಲಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಮಲ್ಲಿಕಟ್ಟೆ ಶಾಖೆಗೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು 2.50 ಕೋಟಿ ರೂ. ವಂಚನೆಗೈದ ಆರೋಪಿಗಳ ಜಾಲವನ್ನು ನಗರದ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಉಜ್ಜೋಡಿ ನಿವಾಸಿ ಮುನೀರ್ ಕದಮನ್ ಅಬೂಬಕರ್(53) ಮತ್ತು ಆತನಿಗೆ ಸಹಕರಿಸಿದ ನಂದಿಗುಡ್ಡ ನಿವಾಸಿ ಹುಸೇನ್ ಪಿ.(52) ಹಾಗೂ ಇನ್ನೊಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಜೆಪ್ಪು ಮಾರ್ಕೆಟ್ ರೋಡ್ ಮೊಹಮ್ಮದ್ ಮುಸ್ತಾಫಾ(27) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮುನೀರ್ ಕದಮನ್ ಅಬೂಬಕರ್ ಎಂಬಾತ ಎರಡೂ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಗಮನಕ್ಕೆ ಬಂದಿದೆ.
ಸ್ಟೇಟ್ ಬ್ಯಾಂಕ್ ಮಲ್ಲಿಕಟ್ಟೆ ಶಾಖೆಯಿಂದ ಎಂ ಎಸ್ ಎಂ ಇ ಯೋಜನೆಯಡಿಯಲ್ಲಿ ಮೆ.ಎಲೆಕ್ಟೋ ವರ್ಲ್ಡ್ ಎಂಟರ್‌ಪ್ರೆಸಸ್ ಸಂಸ್ಥೆ ನಕಲಿ ದಾಖಲೆಗಳನ್ನು ಸಲ್ಲಿಸಿ 1.20 ಕೋಟಿ ರೂ. ಸಾಲ ಮಂಜೂರು ಮಾಡಿಸಿಕೊಂಡಿತ್ತು. ಅದೇ ರೀತಿ ಮೆ. ಎಂ. ಎಚ್. ಎಂಟರ್‌ಪ್ರೈಸಸ್ ಸಂಸ್ಥೆ ನಕಲಿ ದಾಖಲೆ ಸಲ್ಲಿಸಿ ಸುಮಾರು 1.30 ಕೋಟಿ ರೂ. ಸಾಲ ಮಂಜೂರು ಮಾಡಿಸಿಕೊಂಡಿತ್ತು. ಈ ಹಣವನ್ನು ಆರೋಪಿಗಳು ಉದ್ದೇಶಿತ ವ್ಯವಹಾರಕ್ಕೆ ಬಳಸದೆ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿರುವ ಬಗ್ಗೆ ಸೆ.16ರಂದು ಬ್ಯಾಂಕ್‌ನ ಮುಖ್ಯ ಪ್ರಬಂಧಕರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.