ಮಂಗಳೂರು: ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಹಾಸ್ಟೆಲ್ ಮಾಲೀಕರು ಮತ್ತು ಅವರ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಲಬುರಗಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ವಿಕಾಸ್ (18) ಹಲ್ಲೆಗೊಳಗಾದವರು. ಕಳೆದ ಆರು ತಿಂಗಳಿನಿಂದ ಕದ್ರಿಯ ಬಾಯ್ಸ್ ಪಿಜಿಯಲ್ಲಿ ವಾಸವಾಗಿದ್ದ ವಿಕಾಸ್, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಬೇಸತ್ತು ಬೇರೆ ಕೋಣೆಗೆ ಸ್ಥಳಾಂತರಗೊಂಡಿದ್ದರು. ಪಿಜಿಯ ಊಟದಲ್ಲಿ ಹುಳುಗಳು, ಕೊಳಕು ಶೌಚಾಲಯ ಸೇರಿದಂತೆ ನರಕಸದೃಶ ವಾತಾವರಣದ ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿ ವಿಕಾಸ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಕುಪಿತಗೊಂಡ ಪಿಜಿ ಮಾಲೀಕ ಸಂತೋಷ್ ಮತ್ತು ಅವರ ಸಹಚರರು ಮಾರ್ಚ್ 17ರ ರಾತ್ರಿ 10.30ರ ಸುಮಾರಿಗೆ ವಿಕಾಸ್‌ನನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ರೇಟಿಂಗ್ ತೆಗೆದುಹಾಕುವಂತೆ ಬೆದರಿಕೆ ಹಾಕಿದ್ದ ಸಂತೋಷ್, ವಿಕಾಸ್ ನಿರಾಕರಿಸಿದಾಗ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವಿಕಾಸ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.