ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ತನಿಖಾ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಖೀರಪ್ಪ (55) ಎಂಬುವವರು ಆದಿತ್ಯವಾರ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಹಾಗೂ ಹಣಕಾಸಿನ ಸಮಸ್ಯೆಗಳಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಮೃತರು ಉತ್ತರ ಕನ್ನಡದ ಕಾರವಾರ ಮೂಲದವರಾಗಿದ್ದು, ನಿನ್ನೆ (ಜುಲೈ 19) ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿದ್ದರು. ಆದರೆ, ಇಂದು (ಜುಲೈ 20) ಕರ್ತವ್ಯಕ್ಕಾಗಿ ಠಾಣೆಯಿಂದ ದೂರವಾಣಿ ಕರೆ ಮಾಡಿದಾಗ ಅವರು ಸ್ಪಂದಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಠಾಣಾ ಸಿಬ್ಬಂದಿಗಳು ಖೀರಪ್ಪ ಅವರ ಬಾಡಿಗೆ ಮನೆಗೆ ತೆರಳಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಮುನ್ನ ಖೀರಪ್ಪ ಅವರು ತಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಸಹಜ ಸಾವು (ಯು.ಡಿ.ಆರ್) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.