ಮಂಗಳೂರು: ಅತ್ಯಾಚಾರ ಸಂತ್ರಸ್ಥೆಯ ಮಗು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಕ್ಟರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಬಿಸಿ ರೋಡ್‌ನ ವೈದ್ಯ ಡಾ| ಸೋಮೇಶ್ ಸೊಲೊಮನ್, ಮಂಗಳೂರಿನ ಪಿಜಿ ಮಾಲಕಿ ವಿಜಯಲಕ್ಷ್ಮಿ ಆಲಿಯಾಸ್ ವಿಜಯ ಮತ್ತು ಅತ್ಯಾಚಾರ ಆರೋಪಿ ನವನೀತ್ ನಾರಾಯಣ ಬಂಧಿತರು.
ಕಾಪು ತಾಲ್ಲೂಕು ಕಲ್ಲುಗುಡ್ಡೆಯ ನಿವಾಸಿ ಪ್ರಭಾವತಿ– ರಮೇಶ್ ಮೂಲ್ಯ ದಂಪತಿ ಅಂಗನವಾಡಿಗೆ ಶಿಶುವನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಗೆ ಇದು ಇವರ ಮಗುವಲ್ಲ ಎಂದು ತಿಳಿದು ಬಂದಿದೆ. ಅವರದಲ್ಲದ ಮಗುವಿನ ಬಗ್ಗೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು, ಹಣ ನೀಡಿ ಆಸ್ಪತ್ರೆಯ ಮೂಲಕ ಮಗುವನ್ನು ಪಡೆದುಕೊಂಡು ಬಂದಿರುವುದಾಗಿ ದಂಪತಿ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ . ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಶಿರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಶಿರ್ವಪೊಲೀಸರು ಪ್ರಭಾವತಿಯವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಹೆಣ್ಣು ಮಗು ಆಗಸ್ಟ್ 3 ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಜನಿಸಿದ್ದು, ಮಂಗಳೂರಿನ ಕೊಲಾಸೊ ಆಸ್ಪತ್ರೆಯ ವೈದ್ಯರಿಗೆ ₹4.5 ಲಕ್ಷ ಹಣ ನೀಡಿ ಶಿಶು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಮಾನಸಿಕ ಆಸ್ವಸ್ಥೆಯಾಗಿದ್ದ ಮಗುವಿನ ತಾಯಿ ಅತ್ಯಾಚಾರಕ್ಕೆ ಒಳಗಾಗಿದ್ದು, ಆಕೆಯ ಪರಿಚಯದ ನವನೀತ್ ನಾರಾಯಣ ಅತ್ಯಾಚಾರ ನಡೆಸಿದ್ದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಒಳಗೊಂಡ ಆಪಾದಿತರಾದ ಬಿ ಸಿ ರೋಡ್‌ನ ವೈದ್ಯ ಡಾ. ಸೋಮೇಶ್ ಸೊಲೊಮನ್, ವಿಜಯಲಕ್ಷ್ಮೀ ಅಲಿಯಾಸ್ ವಿಜಯ ಮತ್ತು ನವನೀತ್ ನಾರಾಯಣ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಕಳ ಡಿವೈಎಸ್‌ಪಿ ಡಾ. ಹರ್ಷಾ ಪ್ರಿಯಂವದಾ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.