ಮಂಗಳೂರು: ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಕಳವಾರು ನಿವಾಸಿ ಅಜರುದ್ದೀನ್ ಅಲಿಯಾಸ್ ಅಜರ್ ಅಲಿಯಾಸ್ ಅಜ್ಜು(29), ಬಜಪೆ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್(24), ವಾಮಂಜೂರು ನಿವಾಸಿ ನೌಷದ್ ಅಲಿಯಾಸ್ ವಾಮಂಜೂರು ನೌಷದ್ ಅಲಿಯಾಸ್ ಚೊಟ್ಟೆ ನೌಷದ್(39) ಬಂಧಿತರು.
ಅಜರುದ್ದೀನ್ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ ಮೂರು ಕಳವು ಪ್ರಕರಣ ದಾಖಲಾಗಿದ್ದವು. ಈತ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿ ನೀಡಿ ಕೊಲೆಗೆ ಸಹಕರಿಸಿದ್ದಾನೆ. ಆರೋಪಿಗಳು ಕೊಲೆ ಮಾಡಿದ ನಂತರ ಕಾರಿನಲ್ಲಿ ಪರಾರಿಯಾಗಲು ಆರೋಪಿ ಅಬ್ದುಲ್ ಖಾದರ್ ಸಹಕರಿಸಿದ್ದನು. ಇನ್ನೋರ್ವ ಆರೋಪಿ ನೌಷದ್ ಉಳಿದ ಆರೋಪಿಗಳ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದನು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ನೌಷದ್ ವಿರುದ್ಧ ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು.
ಆರೋಪಿಗಳ ಪೈಕಿ ಅಜರುದ್ದೀನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಬ್ದುಲ್ ಖಾದರ್ ಹಾಗೂ ನೌಷದ್ನನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಎಂಟು ಜನರ ಬಂಧಿಸಿದ್ದಾರೆ.
ಮೇ 1ರಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಕೊಟ್ಟಿದ್ದನು. ಕೃತ್ಯಕ್ಕಾಗಿ ಒಂದು ಪಿಕ್ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದರು. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.