ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಇದಲ್ಲದೆ ಮಂಗಳೂರು ಆಯುಕ್ತರ ವ್ಯಾಪ್ತಿಯಲ್ಲಿ ಮೇ 2ರಿಂದ ಮೇ 4ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ರೌಡಿ ಶೀಟರ್ ಮತ್ತು ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದೆ.
ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸಮಾಜ ವಿರೋಧಿ ಶಕ್ತಿಗಳು ಅಮಲು ವಸ್ತುಗಳ ಪ್ರಭಾವದಿಂದ ಅಹಿತಕರ ಘಟನೆಗಳಿಗೆ ಕಾರಣವಾಗಬಹುದು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಬಹುದು ಎಂಬ ಕಾರಣಕ್ಕೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಮೇ 2 ರಿಂದ ಮೇ 4ರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.