ಮಂಗಳೂರು: ನಗರದ ಹೃದಯ ಭಾಗದಲ್ಲಿರುವ ಕಾರ್ ಸ್ಟ್ರೀಟ್ ಬಳಿ ಸೆಪ್ಟೆಂಬರ್ 26ರಂದು ನಡೆದ ಸಿನಿಮೀಯ ಶೈಲಿಯ ಚಿನ್ನದ ಗಟ್ಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಠಾಣೆ ಪೊಲೀಸರು ನಾಲ್ವರು ಆರೋಪಿಗಳು ಮತ್ತು ಕಾನೂನು ಸಂಘರ್ಷಕ್ಕೊಳಗಾದ ಒಬ್ಬ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆಗೆ ಬಳಸಿದ ಒಂದು ಸ್ಕೂಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಸೆ. 26ರಂದು ರಾತ್ರಿ ಸುಮಾರು 8:45 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಚಿನ್ನಾಭರಣದ ಅಂಗಡಿಯ ಕೆಲಸಗಾರರಾದ ಮುಸ್ತಾಫಾ ಎಂಬವರು ತಮ್ಮ ಸ್ಕೂಟರ್ (ನಂ. KA-19EZ-2079) ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದರು.
ಅವರು ಕಾರ್ ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಗೆ ಬರುತ್ತಿದ್ದಂತೆ, ಮತ್ತೊಂದು ಸ್ಕೂಟರ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಇದೇ ವೇಳೆ, ಕಾರೊಂದರಲ್ಲಿ ಬಂದ ಉಳಿದ ಆರೋಪಿಗಳು ಮುಸ್ತಾಫಾ ಅವರನ್ನು ಬಲವಂತವಾಗಿ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ. ಅಪಹರಣದ ನಂತರ ಹಲ್ಲೆ ನಡೆಸಿ, ಅವರನ್ನು ಮಂಗಳೂರಿನ ಎಕ್ಕೂರು ಎಂಬಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಈ ದರೋಡೆ ಪೂರ್ವಯೋಜಿತ ಕೃತ್ಯವಾಗಿದ್ದು, ದರೋಡೆಗೆ ಒಳಗಾದ ಚಾಯ್ಸ್ ಗೋಲ್ಡ್ ಅಂಗಡಿಯಲ್ಲೇ ಹಿಂದೆ ಕೆಲಸ ಮಾಡಿದ್ದ ಆರೋಪಿ ಫಾರಿಶ್ ಈ ಪಿತೂರಿಯ ಕೇಂದ್ರಬಿಂದುವಾಗಿದ್ದಾನೆ. ಇದೇ ಅಂಗಡಿಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು, ಮುಸ್ತಾಫಾ ಅವರು ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುವ ಸಮಯದ ಬಗ್ಗೆ ಫಾರಿಶ್‌ಗೆ ಖಚಿತ ಮಾಹಿತಿ ನೀಡಿದ್ದ. ಈ ಮಾಹಿತಿಯನ್ನೇ ಆಧರಿಸಿ ಉಳಿದ ಆರೋಪಿಗಳೊಂದಿಗೆ ಸೇರಿ ಫಾರಿಶ್ ಈ ದರೋಡೆ ಸಂಚನ್ನು ರೂಪಿಸಿದ್ದಾನೆ. ಆರೋಪಿ ಸಫ್ವಾನ್ ಕೃತ್ಯಕ್ಕೆ ಕಾರನ್ನು ಒದಗಿಸಿದ್ದಾನೆ.
ಫಾರಿಶ್ (18 ), ಸಫ್ವಾನ್ (23 ), ಅರಾಫತ್ ಆಲಿ (18 ), ಫರಾಝ್ (19) ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆಗೆ ಬಳಸಲಾದ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ದರೋಡೆ ಮಾಡಿದ ಚಿನ್ನದ ಗಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ತನಿಖೆ ಮುಂದುವರಿದಿದೆ.