ಮಂಗಳೂರು: ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ವಸ್ತು (MDMA) ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರ (PDJ) ನ್ಯಾಯಾಲಯವು, ಐವರು ಆರೋಪಿಗಳು ಎನ್‌ಡಿಪಿಎಸ್ ಕಾಯ್ದೆಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 14-06-2022 ರಂದು, ಮಂಗಳೂರು ಸಿಸಿಬಿ (CCB) ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತಂಡವು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ ಒಟ್ಟು 125 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿತ್ತು. ಈ ಸಂಬಂಧ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ಗಳಾದ 21, 21(ಸಿ), ಮತ್ತು 27(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಂಡ ಬಳಿಕ ಸಿಇಎನ್ ಇನ್ಸ್‌ಪೆಕ್ಟರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜುಡಿತ್ ಅವರು ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಐವರು ಆರೋಪಿಗಳಿಗೆ ಈ ಕೆಳಗಿನಂತೆ ಶಿಕ್ಷೆ ವಿಧಿಸಿದೆ:
1. ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ ಮತ್ತು 3. ಮೊಹಿದ್ದೀನ್ ರಶೀದ್ ಅವರಿಗೆ ಎನ್‌ಡಿಪಿಎಸ್ ಕಲಂ 21(ಸಿ) ಅಡಿಯಲ್ಲಿ ತಲಾ 12 ವರ್ಷಗಳ ಕಠಿಣ ಕಾರಾಗೃಹ ಹಾಗೂ ತಲಾ ರೂ. 1,25,000 ದಂಡ ವಿಧಿಸಲಾಗಿದೆ.
5. ಸಬಿತಾ ಅಲಿಯಾಸ್ ಚಿಂಚು ಅವರಿಗೆ ಕಲಂ 21(ಸಿ) ಅಡಿಯಲ್ಲಿ 12 ವರ್ಷಗಳ ಕಠಿಣ ಕಾರಾಗೃಹ ಮತ್ತು ರೂ. 1,25,000 ದಂಡ ವಿಧಿಸಲಾಗಿದೆ.
4. ಅಬ್ದುಲ್ ರವೂಫ್ ಅಲಿಯಾಸ್ ಟಫ್ ರವೂಫ್ ಅವರಿಗೆ ಕಲಂ 21(ಸಿ) ಅಡಿಯಲ್ಲಿ 13 ವರ್ಷಗಳ ಕಠಿಣ ಕಾರಾಗೃಹ ಮತ್ತು ರೂ. 1,35,000 ದಂಡ ವಿಧಿಸಲಾಗಿದೆ.
2. ಮೊಹಮ್ಮದ್ ರಮೀಜ್ ಅವರಿಗೆ ಕಲಂ 21(ಸಿ) ಅಡಿಯಲ್ಲಿ ಗರಿಷ್ಠ 14 ವರ್ಷಗಳ ಕಠಿಣ ಕಾರಾಗೃಹ ಮತ್ತು ರೂ. 1,45,000 ದಂಡ ವಿಧಿಸಲಾಗಿದೆ.
ಕಲಂ 27(ಬಿ) ಅಡಿಯಲ್ಲಿ ಶಿಕ್ಷೆ:
ಮೇಲಿನ ಐವರು ಆರೋಪಿಗಳಿಗೂ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(ಬಿ) ಅಡಿಯಲ್ಲಿ ಹೆಚ್ಚುವರಿಯಾಗಿ ತಲಾ 06 ತಿಂಗಳ ಕಠಿಣ ಕಾರಾಗೃಹ ಮತ್ತು ತಲಾ ರೂ. 10,000 ದಂಡ ವಿಧಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.

































