ರಾಯಚೂರು : ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಬೇಸತ್ತು ಶರಣಬಸವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಯಚೂರು ಜಿಲ್ಲೆಯ ಕಪಗಲ್ ಗ್ರಾಮದಲ್ಲಿ ನಡೆದಿದೆ. ಮನೆಗೆ ಆಸರೆಯಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬ ಹೋರಾಟಕ್ಕೆ ಮುಂದಾಗಿದೆ. ಪತಿ ಸಾವಿನಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಮೃತನ ಪತ್ನಿ ಪಾರ್ವತಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮಾಂಗಲ್ಯ ಸರ ಹಾಗೂ ಮನವಿ ಪತ್ರವನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾರೆ.
ಮೇಸ್ತ್ರಿ ಕೆಲಸ ಜೊತೆಗೆ ಟಂಟಂ ಚಾಲಕರಾಗಿದ್ದ ಶರಣಬಸವ, ವಿವಿಧ ಫೈನಾನ್ಸ್‌ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಆದರೆ ಅವುಗಳ ಟಾರ್ಚರ್ ತಾಳದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮನೆಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡಿರುವುದರಿಂದ ಪರಿಹಾರಕ್ಕೆ ಮನೆಯವರು ಮನವಿ ಮಾಡಿದ್ದಾರೆ. ಸಾಲ ವಸೂಲಿಗಾಗಿ ಕಿರುಕುಳ ಕೊಡುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಾಲ ತೀರಿಸಲು ಸಮಯಾವಕಾಶವನ್ನೂ ಕೊಡದೆ ಮನೆ ಬಾಗಿಲು ಬಡಿಯುತ್ತಿರುವುದಕ್ಕೆ ಬಡ ಜನರು ಕಂಗಾಲಾಗಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
 
				 
         
         
         
															 
                     
                     
                     
                    


































 
    
    
        