ಶಿವಮೊಗ್ಗ: ಆಗ್ರಾದಲ್ಲಿ ತರಬೇತಿ ವೇಳೆ ಪ್ಯಾರಚೂಟ್ ಜಿಗಿತದಲ್ಲಿ ಹುತಾತ್ಮರಾದ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅಂತ್ಯಕ್ರಿಯೆ ಸ್ವಗ್ರಾಮ ಸಂಕೂರಿನಲ್ಲಿ ಸಕಲ ಸರ್ಕಾರ ಗೌರವಗಳೊಂದಿಗೆ ಭಾನುವಾರ ನೆರವೇರಿತು.
ಪಾರ್ಥಿವ ಶರೀರವನ್ನು ಬೆಳಿಗ್ಗೆ ಶಿವಮೊಗ್ಗ ನಗರಕ್ಕೆ ತರಲಾಯಿತು. ಈ ವೇಳೆ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಎಸ್.ಎನ್. ಚನ್ನಬಸಪ್ಪ ಅಂತಿಮ ನಮನ ಸಲ್ಲಿಸಿದರು, ನಂತರ ಬೆಳಿಗ್ಗೆ 11.30ಕ್ಕೆ ಸೇನಾ ವಾಹನದಲ್ಲಿ ಹೊಸನಗರಕ್ಕೆ ತರಲಾಯಿತು. ನಂತರ ಹೊಸನಗರಕ್ಕೆ ಕರೆದೊಯ್ಯಲಾಯಿತು. ಬಳಿಕ, ಊರಿನ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಸುಮಾರು 12 ಕಿ.ಮೀ.ಮೆರವಮಿಗೆಯಲ್ಲಿ ಸಾಗಿತು.
ಹುಟ್ಟೂರಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಶಾಸಕ ಬೇಲೂರು ಗೋಪಾಲಕೃಷ್ಣ, ತಹಶೀಲ್ದಾರ್ ರಶ್ಮಿ ಹಾಲೇಶ್ ಮತ್ತು ಕಾಂಗ್ರೆಸ್ ನಾಯಕ ಕಲಗೋಡು ರತ್ನಾಕರ್ ಗೌರವ ಸಲ್ಲಿಸಿದರು.ಬಳಿಕ ರಾಜ್ಯ ಪೊಲೀಸ್ ತುಕಡಿ ಹಾಗೂ ವಾಯುಸೇನೆ ಕುಶಲತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದ ನಂತರ, ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.