ಲಕ್ನೋ: ಉತ್ತರ ಪ್ರದೇಶದ ಮೀರತ್ನ ಲಿಸಾರಿ ಗೇಟ್ ಪ್ರದೇಶದಲ್ಲಿ ಗುರುವಾರ ಒಂದೇ ಕುಟುಂಬದ ಐವರು ಸದಸ್ಯರು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರಲ್ಲಿ ಮೊಯಿನ್ (ಪತಿ), ಅಸ್ಮಾ (ಪತ್ನಿ) ಮತ್ತು ಅವರ ಮೂವರು ಪುತ್ರಿಯರಾದ ಅಫ್ಸಾ (8), ಅಜೀಜಾ (4) ಮತ್ತು ಆದಿಬಾ (1) ಸೇರಿದ್ದಾರೆ. ಪತಿ, ಪತ್ನಿ ಮತ್ತು ಮಕ್ಕಳನ್ನು ಕೊಂದ ನಂತರ, ಆರೋಪಿಗಳು ಹುಡುಗಿಯರ ಶವಗಳನ್ನು ಗೋಣಿಚೀಲದಲ್ಲಿ ಕಟ್ಟಿ ಹಾಸಿಗೆಯ ಪೆಟ್ಟಿಗೆಯಲ್ಲಿ ಅಡಗಿಸಿಟ್ಟಿದ್ದರು. ಗೃಹೋಪಯೋಗಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದ್ದು, ಇದರಿಂದಾಗಿ ದರೋಡೆ ನಡೆಯುವ ಸಾಧ್ಯತೆಯೂ ಹೆಚ್ಚುತ್ತಿದೆ.
“ಮರಣೋತ್ತರ ಪರೀಕ್ಷೆಯ ನಂತರ ಸಾವಿನ ನಿಖರವಾದ ಕಾರಣವನ್ನು ದೃಢಪಡಿಸಲಾಗುವುದು. ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ, ಇದು ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿದ ಕೊಲೆ ಪ್ರಕರಣವೆಂದು ತೋರುತ್ತದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ ಮತ್ತು ತನಿಖೆ ವೇಗವಾಗಿ ಪ್ರಗತಿಯಲ್ಲಿದೆ” ಎಂದು ಎಸ್ಎಸ್ಪಿ ವಿಪಿನ್ ಟಾಡಾ ಹೇಳಿದ್ದಾರೆ.
ಬುಧವಾರ ಮನೆಯಿಂದ ಯಾರು ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಛಾವಣಿಯ ಮೂಲಕ ಮನೆಯೊಳಗೆ ಪ್ರವೇಶಿಸಿದಾಗ ಆ ಭೀಕರ ದೃಶ್ಯ ಬೆಳಕಿಗೆ ಬಂದಿತು. ಮನೆಯಲ್ಲಿರುವ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುವುದು ಸಾಕಷ್ಟು ಅನುಮಾನಗಳಿಗೆ ಸಾಕ್ಷಿಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.