ಇಸ್ಲಾಮಾಬಾದ್ : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿ ಬಳಿಕ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ಉತ್ತರ ನೀಡಿತ್ತು. ಇದೀಗ ಭಾರತವು ಯಾವುದೇ ಕ್ಷಣದಲ್ಲಿ ಪ್ರಬಲ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂಬ ಭಯದಿಂದ 100 ಕ್ಕೂ ಹೆಚ್ಚು ಸೇನಾ ಅಧಿಕಾರಿಗಳು ಮತ್ತು 500 ಕ್ಕೂ ಹೆಚ್ಚು ಸೈನಿಕರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ತಮ್ಮ ಸುರಕ್ಷತೆಯ ಬಗ್ಗೆ ಭಯಗೊಂಡು, ತಮ್ಮ ಕುಟುಂಬಗಳು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿರುವುದರಿಂದ ಕೆಲವು ಸೈನಿಕರು ರಾಜೀನಾಮೆ ನೀಡುತ್ತಿದ್ದಾರೆ. ಈಗಾಲೇ ಕೆಲವರು ರಾಜೀನಾಮೆ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಸೈನಿಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಸೈನಿಕರ ಸಾಮೂಹಿಕ ರಾಜೀನಾಮೆಯಿಂದಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯನ್ನು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿದೆ. ಭಾರತ-ಪಾಕಿಸ್ತಾನ ಗಡಿಯ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ 11 ನೇ ದಳದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಮರ್ ಅಹ್ಮದ್ ಬುಖಾರಿ ಸೇನಾ ಪ್ರಧಾನ ಕಚೇರಿಗೆ ಪತ್ರ ಬರೆದಿದ್ದು, ಸೇನಾ ಅಧಿಕಾರಿಗಳ ಹಾಗೂ ಸೈನಿಕರ ಸಾಮೂಹಿಕ ರಾಜೀನಾಮೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಪಾಕ್ ಸೇನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಸೇನೆಯ ನಿಯಮವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪಾಕಿಸ್ತಾನ ಸೇನಾ ಕಾಯ್ದೆ(1952) ಅಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.