ಯುಗಾದಿಯು ಪ್ರಕೃತಿಯಲ್ಲಿ ಹೊಸ ಚಿಗುರು ಮೂಡುವ ಸಮಯದಲ್ಲಿ ಬರುವುದರಿಂದ ಇದು ಜೀವನದಲ್ಲಿ ಹೊಸ ಭರವಸೆ ಮತ್ತು ಚೈತನ್ಯವನ್ನು ತರುತ್ತದೆ. ಯುಗಾದಿ ಚೈತ್ರ ಮಾಸದ ಮೊದಲ ದಿನ, ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ ಮತ್ತು ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸ ಲಾಗುತ್ತದೆ. ಇದು ಹೊಸ ವರ್ಷದ ಪ್ರಾರಂಭವಾಗಿದ್ದು, ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಯುಗಾದಿ ಹಬ್ಬದ ವಿಶೇಷತೆಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನದ ತತ್ವಗಳನ್ನು ಪ್ರತಿಬಿಂಬಿಸುತ್ತವೆ.
ಇಡೀ ಮನೆಯನ್ನು ಸ್ವಚ್ಛಗೊಳಿಸಿ, ತಳಿರು, ತೋರಣಗಳಿಂದ ಸಿಂಗರಿಸುವುದು. ದೇವಸ್ಥಾನ ಗಳನ್ನು ಶುಚಿಗೊಳಿಸುವುದು, ಹೊಸಬಟ್ಟೆಗಳ ಖರೀದಿ, ಬಂಧು, ಬಳಗದ ಉಭಯ ಕುಶಲೋಪರಿ ಎಲ್ಲವೂ ಒಂದು ಬಗೆಯ ಸಂಭ್ರಮದಂತೆ ನಡೆದು ಹೋಗುತ್ತವೆ. ಮನೆಯ ಅಲಂಕಾರವೂ ಯುಗಾದಿಯ ವಿಶೇಷತೆಯಾಗಿದೆ. ಮಾವಿನ ಎಲೆಗಳ ತೋರಣವನ್ನು ಬಾಗಿಲುಗಳಿಗೆ ಕಟ್ಟುವುದು ಸಾಂಪ್ರದಾಯಿಕ. ಮಾವಿನ ಎಲೆಗಳು ವಸಂತ ಋತುವಿನ ಹಸಿರು ಮತ್ತು ಸಮೃದ್ಧಿಯ ಸಂಕೇತವಾಗಿದೆ, ಇದು ಜನರಲ್ಲಿ ಹೊಸ ಆಶೆ ಮತ್ತು ಉತ್ಸಾಹವನ್ನು ಹುಟ್ಟಿಸುತ್ತದೆ.
ಯುಗಾದಿ ಹಬ್ಬದ ಮುಖ್ಯ ವಿಶೇಷತೆಯೆಂದರೆ ಅದರ ವಿವಿಧ ಬಗೆಯ ಆಹಾರಗಳು. ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕರಿಗಡುಬು, ಹೋಳಿಗೆ ಮುಖ್ಯವಾದ ಸಿಹಿ ತಿನಿಸು. ಮನೆಯಲ್ಲಿ ಬೇವಿನ ಎಲೆಗಳು ಮತ್ತು ಬೆಲ್ಲವನ್ನು ಮಿಶ್ರಣ “ಬೇವು-ಬೆಲ್ಲ”ವನ್ನು ತಯಾರಿಸಿ ತಿನ್ನುವುದು ಇದರ ಪ್ರಮುಖ ಆಚರಣೆ. ಬೇವಿನ ಕಹಿ ಮತ್ತು ಬೆಲ್ಲದ ಸಿಹಿ ಜೀವನದಲ್ಲಿ ಎದುರಾಗುವ ಸುಖ – ದುಃಖಗಳನ್ನು ಸೂಚಿಸುತ್ತದೆ. “ಎಲ್ಲವೂ ಸಮವಾಗಿ ಸ್ವೀಕರಿಸಬೇಕು” ಎಂಬ ತತ್ವವನ್ನು ಇದು ಕಲಿಸುತ್ತದೆ. ಬೇವಿನ ಕಹಿಯಲ್ಲಿ ನಮ್ಮ ನೋವುಗಳನ್ನು, ಬೆಲ್ಲದ ಸಿಹಿಯಲ್ಲಿ ನಮ್ಮ ಸಂತೋಷಗಳನ್ನು ಕಾಣುತ್ತೇವೆ. ಹೀಗೆ ಪ್ರತಿ ವರ್ಷ ಬರುವ ಯುಗಾದಿ ಹೊಸ ಆಶೆಯ ಬೀಜವನ್ನು ನಮ್ಮ ಮನಸ್ಸಿನಲ್ಲಿ ನೆಡುತ್ತದೆ.
ಯುಗಾದಿ ಹಬ್ಬದ ಸಂಭ್ರಮ ಮೊದಲಿನಂತಿಲ್ಲ ಎನ್ನುವ ಮಾತು ಕೇಳಿ ಬರುತ್ತಿವೆ. ನಿಜ, ಕಳೆದೊಂದು ದಶಕದಿಂದ ಯುಗಾದಿ ಮಾತ್ರವಲ್ಲ, ಎಲ್ಲ ಸಾಂಪ್ರದಾಯಿಕ ಹಬ್ಬಗಳ ಕಳೆ, ಸಂಭ್ರಮ ಮಸುಕಾಗುತ್ತಿದೆ. ನಮ್ಮ ಕೌಟುಂಬಿಕ ವ್ಯವಸ್ಥೆಗಳಲ್ಲಾಗುತ್ತಿರುವ ಪಲ್ಲಟಗಳು ಇದಕ್ಕೆ ಮುಖ್ಯ ಕಾರಣವಾಗಿವೆ. ವಿಘಟಿತ ಕುಟುಂಬಗಳು ತಂತಮ್ಮ ನೆಲೆ ಕಂಡುಕೊಂಡು ಜೀವನ ನಿರ್ವಹಿಸುತ್ತಿರುವ ಈ ದಿನಗಳಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಕಾಣಬರುತ್ತಿದ್ದ ಒಗ್ಗಟ್ಟು, ಕೂಡಿಕೊಳ್ಳುವ ಭಾವನೆಗಳು ಕ್ಷೀಣಿಸುತ್ತಿವೆ. ಆದರೆ, ನಮ್ಮ ಗ್ರಾಮೀಣ ಪರಿಸರ ಈಗಲೂ ಇಂತದೊಂದು ಬಾಂದವ್ಯದ ಎಳೆಯನ್ನು ಮುಂದಕ್ಕೊಯುತ್ತಿದೆ ಎಂಬುದನ್ನೂ ಸಹಾ ಮರೆಯುವಂತಿಲ್ಲ.
ಇದೇ ಸಂದರ್ಭದಲ್ಲಿ ಬದಲಾದ ಆರ್ಥಿಕ, ಔದ್ಯೋಗಿಕ ಪರಿಸ್ಥಿತಿಗಳು ಪಟ್ಟಣ, ನಗರ ಕೇಂದ್ರಿತವಾಗಿ ನೆಲೆಗೊಂಡಿರುವವರನ್ನು ಮತ್ತೆ ಹಳ್ಳಿಗಳಿಗೆ ಕರೆ ತರುತ್ತಿವೆ. ಒಂದು ಕಾಲದಲ್ಲಿ ಓದಿದವರು ಹಳ್ಳಿಗಳಲ್ಲಿರುವುದೇ ಮಹಾಪರಾಧ ಎಂದು ಭಾವಿಸಲಾಗುತ್ತಿತ್ತು. ಎಂತದ್ದೋ ಒಂದು ದುಡಿಮೆ ಇರಬೇಕು. ಅದು ನಗರದಲ್ಲೇ ಇರಬೇಕು ಎನ್ನುವ ಭಾವನೆ ಪ್ರಬಲ ವಾಗಿತ್ತು. ಇವತ್ತು ನಗರ ಕೇಂದ್ರಿತವಾಗಿ ದುಡಿಯುವವರ ಒತ್ತಡ, ಕಡಿಮೆ ವೇತನ, ಕುಟುಂಬಗಳನ್ನು ನಿರ್ವಹಿಸಲಾಗದ ಅಸಹಾಯಕತೆ ಯುವಜನರ ಆಲೋಚನೆಗಳಲ್ಲಿ ಬದಲಾವಣೆ ತಂದಿದೆ. ಹಾಗಾಗಿ, ವ್ಯಾಪಾರ, ವಹಿವಾಟು, ಹೊಸ ಬಗೆಯ ಕೃಷಿ ಮಾದರಿಗಳನ್ನು ತಲೆಯಲ್ಲಿಟ್ಟುಕೊಂಡು ಹಳ್ಳಿಗಳಲ್ಲಿ ಪ್ರಯೋಗಗಳಿಗೆ ಇಳಿಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಶೇಷವಾಗಿ ಬರೀ ಕೃಷಿ ಕೇಂದ್ರಿತ ಕೆಲಸಗಳಲ್ಲೇ ತೊಡಗಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದ ಗ್ರಾಮೀಣ ಹೆಣ್ಣು ಮಕ್ಕಳು ಗೃಹ ಉದ್ಯಮಗಳನ್ನಾರಂಭಿಸಿ, ಯಶಸ್ವಿಯಾಗುತ್ತಿರುವುದು ಹೊಸ ಭರವಸೆ ಮೂಡಿಸುತ್ತಿವೆ. ನಮ್ಮ ಗ್ರಾಮೀಣ ಬದುಕನ್ನು ಪುನಃ ಸಶಕ್ತಗೊಳಿಸುವ ಇಂತಹ ಬೆಳವಣಿಗೆಗಳನ್ನು ಸ್ವಾಗತಿಸೋಣ. ಯುಗಾದಿಯ ಸಂಭ್ರಮ ಮರುಕಳಿಸುವ ದಿನಗಳು ಮತ್ತೆ ಬರಲಿ…

ಲೇಖನ ಜಿ.ಶಾಂತ ಗಂಡಪ್ಪ































