ಬೀದರ್: ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ ಮನನೊಂದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಡತನದ ನಡುವೆಯೂ ವೈದ್ಯನಾಗಬೇಕೆಂಬ ಕನಸು ಹೊತ್ತಿದ್ದ ಮಗ, ಕೇವಲ 80 ಸಾವಿರ ರೂಪಾಯಿಗಾಗಿ ಈ ನಿರ್ಧಾರ ಕೈಗೊಂಡಿರುವುದು ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ. ಆನ್ಲೈನ್ ಗೇಮಿಂಗ್ ಚಟ ಯುವ ಪೀಳಿಗೆಯನ್ನು ಹೇಗೆ ಬಲಿಪಡೆಯುತ್ತಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ಬೀದರ್ನ ಬ್ರಿಮ್ಸ್ (BRIMS) ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಆವಿಷ್ಕಾರ ಚವ್ಹಾಣ್ (21), ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ ಕಾರಣಕ್ಕೆ ವಸತಿ ನಿಲಯದ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆವಿಷ್ಕಾರ ಆನ್ಲೈನ್ ಗೇಮ್ನಲ್ಲಿ ಸುಮಾರು 80,000 ರೂಪಾಯಿಗಳನ್ನು ಕಳೆದುಕೊಂಡಿದ್ದರು. ಅವರ ಮೊಬೈಲ್ ಮತ್ತು ವಾಟ್ಸಾಪ್ ಚಾಟ್ಗಳನ್ನು ಪರಿಶೀಲಿಸಿದಾಗ ಗೇಮ್ಗೆ ಸಂಬಂಧಿಸಿದ ಸಂಭಾಷಣೆಗಳು ಪತ್ತೆಯಾಗಿವೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

































