ಉಡುಪಿ: ಭಾನುವಾರ ಜಿಲ್ಲಾಡಳಿತದ ಮುಂದೆ ಶರಣಾಗಿದ್ದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರನ್ನು ಪೊಲೀಸರ ತಂಡವು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದೆ.
ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಫೆಬ್ರವರಿ 3ರಂದು ವೀಡಿಯೋ ಕಾನ್ಸರೆನ್ಸ್ ಮೂಲಕ ಹಾಜರುಪಡಿಸುವಂತೆ ನ್ಯಾಯಾಧೀಶರು ತಿಳಿಸಿದರು.
ಲಕ್ಷ್ಮೀ , ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗುಟ್ಟೆಯ ನಿವಾಸಿ ಪಂಜು ಪೂಜಾರಿ – ದಾರಕ್ಕ ದಂಪತಿಯ 5ನೇ ಪುತ್ರಿಯಾಗಿದ್ದಾರೆ. ಸಹೋದರರಾದ ರಾಮ್, ರಾಜು, ವಿಠಲ, ಬಸವ ಕೃಷಿಕರಾಗಿದ್ದಾರೆ.
ತಂಗಿ ರಾಜೀವಿಯ ವಿವಾಹವಾಗಿದೆ. ತಂದೆ ಹಾಗೂ ತಾಯಿ ಮೃತಪಟ್ಟಿದ್ದಾರೆ. ಈಕೆಯ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈಕೆ ಆಂಧ್ರಪ್ರದೇಶದಲ್ಲಿ ಗಂಡ ಮತ್ತು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು ನಕ್ಸಲ್ ಚಟುವಟಿಕೆಯಿಂದ ವಿಮುಖರಾಗಿದ್ದರು.