ಬೆಂಗಳೂರು : ಕಣ್ಣು ಕಂಡರೂ ಸಹ ಪಿಎಸ್ಐ, ಪ್ರಥಮ ದರ್ಜೆ ಸಹಾಯಕ, ಎಸ್ಡಿಎ ಪರೀಕ್ಷೆ ಪಾಸ್ ಮಾಡಲು ಆಗದೇ ಅಕ್ರಮ ಮಾರ್ಗ ಹಿಡಿದು ಪರೀಕ್ಷೆಯಲ್ಲಿ ಕಾಪಿ ಮಾಡಲು ಪ್ರಯತ್ನಿಸಿದವರು ಕರ್ನಾಟಕದಲ್ಲಿ ಇದ್ದಾರೆ. ಆದರೆ ಇಂತಹವರ ಮಧ್ಯೆಯೇ ಇರುವ ಕರ್ನಾಟಕದ ಮೇಘನಾ ಕೆ ಟಿ ಕಣ್ಣು ಕಾಣದಿದ್ದರೂ ಸಹ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆ ಬರೆದು ಪಾಸ್ ಮಾಡಿದ್ದಾರೆ. ಅದು ಸಹ ಒಂದು ಬಾರಿ ಅಲ್ಲ. ಎರಡೆರಡು ಬಾರಿ ಯುಪಿಎಸ್ಸಿ ಗೆದ್ದಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮ. ವಾಸವಿರುವುದು ಬೆಂಗಳೂರಿನ ಕೆಂಗೇರಿಯಲ್ಲಿ. ಇವರ ತಂದೆ ತಾಂಡವಮೂರ್ತಿ, ತಾಯಿ ನವನೀತ. ಮೇಘನಾ ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇಕಡ.70 ರಷ್ಟು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದರು. ಇದಕ್ಕೆ ಕುಗ್ಗದ ಮೇಘನಾ ತಮ್ಮ ವೈಕಲ್ಯವನ್ನು ಮೆಟ್ಟಿನಿಂತು ಎರಡು ಬಾರಿ ಯುಪಿಎಸ್ ಪರೀಕ್ಷೆ ಬರೆದಿದ್ದಾರೆ.
2021ನೇ ಸಾಲಿನ ಸಿಎಸ್ಇ ಪರೀಕ್ಷೆ ಬರೆದು 425ನೇ ರ್ಯಾಂಕ್ ಪಡೆದಿದ್ದಾರೆ . 2020ನೇ ಸಾಲಿನಲ್ಲಿ ಮೇಘನಾ 465ನೇ ರ್ಯಾಂಕ್ ಪಡೆದಿದ್ದರು.ಮೇಘನಾ ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಲ್ಲೇ ಪಡೆದರು. 2015 ಬ್ಯಾಚ್ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದು ಪಾಸಾಗಿದ್ದರು. ಭಲೀಖ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಕೆಲಸದ ಜತೆಗೆ ಯುಪಿಎಸ್ಸಿಗೆ ತಯಾರಿ ನಡೆಸಿ ಸಾಧನೆ ಮಾಡಿದ್ದಾರೆ.
































