ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋ.ರೂ.ಗೂ ಹೆಚ್ಚು ಮೊತ್ತ ವಂಚಿಸಿ ಪಲಾಯನ ಮಾಡಿದ್ದ ಪ್ರತಿಷ್ಠಿತ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ದೇಶದಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ತನಿಖಾ ಸಂಸ್ಥೆಗಳ ಕೋರಿಗೆ ಮೇರೆಗೆ ಏಪ್ರಿಲ್ 12ರಂದು ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನ ಆಸ್ಪತ್ರೆಯಲ್ಲಿ ಬಂಧಿಸಲಾಯಿತು ಎಂದು ತಿಳಿದುಬಂದಿದೆ. ಅವನನ್ನು ಭಾರತಕ್ಕೆ ಕರೆತರಲು ತನಿಖಾ ಸಂಸ್ಥೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾನೂನು ಹೋರಾಟ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,850 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಪ್ರಮುಖವಾಗಿ ಬೇಕಾಗಿರುವ ಚೋಕ್ಸಿ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದ. 2018ರಲ್ಲಿ ಇ.ಡಿ 1,217 ಕೋಟಿ ಮೌಲ್ಯದ ಚೋಕ್ಸಿಯ 41 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ಮುಂಬಯಿಯಲ್ಲಿರುವ 2 ಫ್ಲ್ಯಾಟ್‌ಗಳು, ಕೋಲ್ಕತ್ತಾದ ಮಾಲ್, ಮುಂಬೈ-ಗೋವಾ ಹೆದ್ದಾರಿಯಲ್ಲಿ 27 ಎಕರೆ ಭೂಮಿ, ತಮಿಳುನಾಡಿನಲ್ಲಿ 101 ಎಕರೆ ಜಮೀನು, ಆಂಧ್ರಪ್ರದೇಶದ ನಾಸಿಕ್, ನಾಗ್ಪುರದಲ್ಲಿನ ಜಮೀನುಗಳು, ಅಲ್ಲಾಬಾಗ್‌ನಲ್ಲಿರುವ 2 ಬಂಗಲೆಗಳು ಮತ್ತು ಸೂರತ್‌ನಲ್ಲಿರುವ ಕಚೇರಿಯನ್ನು ಇಡಿ ವಶಪಡಿಸಿಕೊಂಡಿತ್ತು. ಈವರೆಗೆ ಇ.ಡಿ ಚೋಕ್ಸಿ ವಿರುದ್ಧ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಿದೆ. 2019ರಲ್ಲಿ ಚೋಕ್ಸಿ ದೇಶದಿಂದ ಪರಾರಿಯಾಗಿದ್ದಾನೆ.
65 ವರ್ಷದ ಚೋಕ್ಸಿ 2023ರ ನವೆಂಬರ್ 15ರಿಂದ ʻಎಫ್ ರೆಸಿಡೆನ್ಸಿʼ ಪೌರತ್ವ ಕಾರ್ಡ್ ಪಡೆದು ಬೆಲ್ಜಿಯಂನಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದ. ಅವನ ಪತ್ನಿ ಬೆಲ್ಜಿಯಂನವರೇ ಆದ್ದರಿಂದ ಪೌರತ್ವ ಕಾರ್ಡ್ ಪಡೆಯಲು ಚೋಕ್ಸಿಗೆ ಸಹಕಾರ ನೀಡಿದ್ದಾರೆ. ಈ ನಡುವೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳೋದಕ್ಕೆ ಚೋಕ್ಸಿ ನಕಲಿ ದಾಖಲೆಗಳನ್ನ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. 2024ರ ಸೆಪ್ಟೆಂಬರ್‌ನಲ್ಲಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ತನಿಖಾ ಸಂಸ್ಥೆಗಳು ಬೆಲ್ಜಿಯಂಗೆ ಮನವಿ ಮಾಡಿದ್ದವು. ಆದರೆ ಅಂದು ಚೋಕ್ಸಿ ಪರ ವಕೀಲರು, ನನ್ನ ಕಕ್ಷಿಗಾರನ ಆರೋಗ್ಯ ಸರಿಯಿಲ್ಲ, ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಭಾರತೀಯ ಅಧಿಕಾರಿಗಳು, ಚೋಕ್ಸಿ ಭಾರತದಲ್ಲೂ ಚಿಕಿತ್ಸೆ ಪಡೆಯಬಹುದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.