ನವದೆಹಲಿ: ಮನುಷ್ಯರ ಮಲ ಮೂತ್ರ ತ್ಯಾಜ್ಯಗಳನ್ನು ಹಣ ಕೊಟ್ಟು ಜಾಗತಿಕ ಟೆಕ್ ಕಂಪನಿ ಮೈಕ್ರೋಸಾಫ್ಟ್ ಖರೀದಿಸುತ್ತಿದೆ. ಒಂದು ಟನ್ ತ್ಯಾಜ್ಯವನ್ನು 350 ಡಾಲರ್, ಅಂದರೆ ಸುಮಾರು 30,000 ರೂಪಾಯಿಗೆ ಖರೀದಿ ಮಾಡುತ್ತಿದೆ.
‘ವೋಲೈಡ್ ಡೀಪ್’ ಎನ್ನುವ ಕಂಪನಿ ಜೊತೆ 12 ವರ್ಷಕ್ಕೆ ಡೀಲ್ ಮಾಡಿಕೊಂಡಿದೆ. ಒಟ್ಟು 4.9 ಎಂಎಂಟಿ ಸಾವಯವ ತ್ಯಾಜ್ಯವನ್ನು ಪಡೆಯುತ್ತಿದೆ. ಇದಕ್ಕಾಗಿ ಅದು ಒಟ್ಟು 1.7 ಬಿಲಿಯನ್ ಡಾಲರ್ ಅಥವಾ 14-15 ಸಾವಿರ ಕೋಟಿ ರೂ ವ್ಯಯಿಸಲಿದೆ. ಸಾಫ್ಟ್ ವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಗೋಬರ್ ಗ್ಯಾಸ್ ಬ್ಯುನಿನೆಸ್ಸೆ ಇಳಿದಿದೆಯಾ ಎಂದು ಅನುಮಾನ ಬರಬಹುದು. ಆದರೆ, ತ್ಯಾಜ್ಯ ಖರೀದಿಸುವ ಹಿಂದಿನ ಉದ್ದೇಶ ಬೇರೆ ಇದೆ.
ಮೈಕ್ರೋಸಾಫ್ಟ್ ಸಂಸ್ಥೆಯ ಎಐ ಚಟುವಟಿಕೆಗಳಿಂದ ಸಾಕಷ್ಟು ಇಂಗಾಲ ಅನಿಲವು ವಾತಾವರಣವನ್ನು ಸೇರುತ್ತಿದೆ. 2020ರಿಂದ 2024ರ ಅವಧಿಯಲ್ಲಿ ಕಂಪನಿಯು 75.5 ಮಿಲಿಯನ್ ಟನ್ ಕಾರ್ಬನ್ ಎಮಿಷನ್ ಕಾರಣವಾಗಿದೆ. ಜಾಗತಿಕ ಪರಿಸರ ನಿಯಮಾವಳಿಗಳ ಪ್ರಕಾರ ಕಂಪನಿಗಳು ವಾಯು ಮಾಲಿನ್ಯ ಹೊರ ಹಾಕಿದಷ್ಟೂ ಮಾಲಿನ್ಯ ನಿವಾರಣೆಯ ಕಾರ್ಯವನ್ನೂ ಮಾಡಬೇಕು. ಅಂತೆಯೇ, ಮೈಕ್ರೋಸಾಫ್ಟ್ ಸಂಸ್ಥೆ 2030ರಷ್ಟರಲ್ಲಿ ಕಾರ್ಬನ್ ನೆಗಟಿವ್ ಆಗುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ವೋಲ್ವೆಡ್ ಡೀಪ್ ಕಂಪನಿಯನ್ನು ಕೈಜೋಡಿಸಿಕೊಂಡಿದೆ.
ವಾಲ್ವೆಡ್ ಡೀಪ್ ಕಂಪನಿಯು ಮರುಬಳಕೆ ಮಾಡಲು ಕಷ್ಟಸಾಧ್ಯವಂತಹ ಜೈವಿಕ ತ್ಯಾಜ್ಯವನ್ನು ಸಂಗ್ರಹಿಸಿ, ಭೂಮಿಯಿಂದ 5,000 ಅಡಿ ಕೆಳಗೆ ಪೈಪ್ ಮೂಲಕ ತಳ್ಳುತ್ತದೆ. ಆಗ ಈ ಬಯೋವರ್ಜಕಗಳು ಡೀಕಾಂಪೋಸ್ ಆಗುವ ಪ್ರಕ್ರಿಯೆ ನಿಲ್ಲುತ್ತದೆ. ಇದರಿಂದ ಮೀಥೇನ್ ಹಾಗೂ ಕಾರ್ಬನ್ ಡೈ ಆಕ್ಸೆಡ್ ವಾತಾವರಣಕ್ಕೆ ಬಿಡುಗಡೆ ಆಗದಂತೆ ನಿಯಂತ್ರಣವಾಗುತ್ತದೆ. ಈ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯವಾಗುತ್ತದೆ.
ಮೈಕ್ರೋಸಾಫ್ಟ್ ಇತ್ಯಾದಿ ಆಧುನಿಕ ಟೆಕ್ ಕಂಪನಿಗಳು ಕಾರ್ಯನಿರ್ವಹಿಸಬೇಕಾದರೆ ಪರಿಸರ ಮಾಲಿನ್ಯವಾಗುವಂತಹ ಪ್ರಕ್ರಿಯೆಗಳು ಅನಿವಾರ್ಯ. ಅಲ್ಲಿ ತುಂಬಿದ ಪಾಪವನ್ನು ಬೇರೆಡೆ ನಿವಾರಿಸುವ ಕೆಲಸವನ್ನು ಅನೇಕ ಕಂಪನಿಗಳು ಮಾಡುತ್ತವೆ. ಅದಕ್ಕಾಗೆಂದೇ ಕಾರ್ಬನ್ ಕ್ರೆಡಿಟ್ ವ್ಯವಸ್ಥೆ ಇದೆ. ಪರಿಸರಸ್ನೇಹಿ ಕಾರ್ಯಗಳಿಗೆ ಹಣ ವಿನಿಯೋಗಿಸಿ ಕಾರ್ಬನ್ ಕ್ರೆಡಿಟ್ ಸಂಪಾದಿಸಬಹುದು.