ಹೊಳಲ್ಕೆರೆ : ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಜಿಲ್ಲೆಯ ಸಂಸ್ಕøತಿ, ಸಾಹಿತ್ಯವನ್ನು ಜಗತ್ತಿನಾದ್ಯಂತ ಪಸರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಪಟ್ಟಣದ ಸಂವಿಧಾನಸೌಧದಲ್ಲಿ ಗುರುವಾರ ನಡೆದ ಹದಿನೇಳನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಗಾಟಿಸಿ ಮಾತನಾಡಿದರು.
ವಚನ ಸಾಹಿತ್ಯ, ದಾಸ ಸಾಹಿತ್ಯದ ಕೊಡುಗೆ ಕನ್ನಡಕ್ಕೆ ಅಪಾರ. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದು ಹೆಮ್ಮೆಯ ವಿಷಯ. ಬೆಳಗೆರೆ ಕೃಷ್ಣಶಾಸ್ತ್ರೀ, ಹುಲ್ಲೂರು ಶ್ರೀನಿವಾಸಜೋಯಿಸ್, ಲಕ್ಷ್ಮಣ್ ತೆಲಗಾವಿ, ಡಾ.ಬಿ.ರಾಜಶೇಖರಪ್ಪ, ಬಂಜಗೆರೆ ಜಯಪ್ರಕಾಶ್, ತ.ರಾ.ಸು. ಬಿ.ಎಲ್.ವೇಣು ಇವರುಗಳ ಕೊಡುಗೆ ಕನ್ನಡಕ್ಕೆ ಅಪಾರ. ಲೋಕೇಶ್ ಅಗಸನಕಟ್ಟೆ, ತಾರಿಣಿ ಶುಭದಾಯಿನಿ ಇವರುಗಳು ಅತ್ಯುತ್ತಮ ವಿಮರ್ಶಕರುಗಳಾಗಿ ಪ್ರಸಿದ್ದಿಯಾಗಿದ್ದಾರೆ. ಮೀರಾಸಾಬಿಹಳ್ಳಿ ಶಿವಣ್ಣ ಜಾನಪದ ಲೋಕವನ್ನು ಶ್ರೀಮಂತಗೊಳಿಸಿದ್ದಾರೆಂದು ವರ್ಣಿಸಿದರು.
ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿರುವ ಚಿತ್ರದುರ್ಗದ ಕೋಟೆಯನ್ನು ರಾಜವೀರಮದಕರಿನಾಯಕ, ವೀರವನಿತೆ ಒನಕೆ ಓಬವ್ವ ಇವರುಗಳು ಆಳಿರುವುದು ಚಿತ್ರದುರ್ಗದ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಶ್ಲಾಘಿಸಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣಗೊಳಿಸಿದರು. ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಕಲಿತು. ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಯನ್ನು ಕಲಿಯಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಬೇಕಾದರೆ ಎಲ್ಲಾ ಭಾಷೆಗಳು ನೆರವಾಗಲಿವೆ. ತಮಿಳುನಾಡು, ಆಂಧ್ರ, ಕೇರಳದಲ್ಲಿ ಅವರವರ ಮಾತೃ ಭಾಷೆಯನ್ನು ಬಿಟ್ಟರೆ ಬೇರೆ ಭಾಷೆಯನ್ನು ಮಾತನಾಡುವುದಿಲ್ಲ. ಅಂತಹ ಭಾಷಾಭಿಮಾನವನ್ನು ಕರ್ನಾಟಕದವರು ಮೈಗೂಡಿಸಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ಹೋದಾಗ ಇಂಗ್ಲಿಷ್, ಹಿಂದಿ ಭಾಷೆ ಕಲಿತಿರಬೇಕು. ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕಾಗಿ ಸರ್ಕಾರ ಲಕ್ಷಾಂತರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಶೂ.ನೀಡುತ್ತಿದೆ. ಕನ್ನಡಕ್ಕೆ ಮೊದಲ ಪ್ರಾಧಾನ್ಯತೆ ನೀಡಿ ಅನ್ಯ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ. ಇಂತಹ ಸಮ್ಮೇಳನಗಳ ಮೂಲಕ ಸಾಹಿತಿಗಳನ್ನು ಗೌರವಿಸಬೇಕೆಂದರು.
ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಮಹಾಸ್ವಾಮಿ ಮಾತನಾಡಿ ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಒಂದು ಸಾವಿರ ಇಂಗ್ಲಿಷ್ ಶಾಲೆಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಕನ್ನಡ ಉಳಿಯಬೇಕಾದರೆ ಸರ್ಕಾರ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಡಬೇಕು. ರಾಜ್ಯದಲ್ಲಿ ಶತಮಾನ ಕಂಡಿರುವ ಅನೇಕ ಕನ್ನಡ ಶಾಲೆಗಳಿವೆ. ಅಂತಹ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಕನ್ನಡದ ಅಸ್ಮಿತೆಯನ್ನು ಕಾಪಾಡಬೇಕೆಂದು ಒತ್ತಾಯಿಸಿದರು.
ನವೆಂಬರ್ ತಿಂಗಳು ಬಂತೆಂದರೆ ಕನ್ನಡದ ಬಗ್ಗೆ ಪುಂಕಾನು ಪುಂಕವಾಗಿ ಮಾತನಾಡುವ ನಾವೆಲ್ಲರೂ ಎಷ್ಟರ ಮಟ್ಟಿಗೆ ಕನ್ನಡವನ್ನು ಉಳಿಸಿ ಬೆಳೆಸಿದ್ದೇವೆನ್ನುವುದನ್ನು ಯೋಚಿಸಬೇಕು. ದ್ವಿಭಾಷಾ ಸೂತ್ರ ಅನುಸರಿಸಿದರೆ ಮಾತ್ರ ಕನ್ನಡದ ಅಸ್ತಿತ್ವ ಉಳಿಯಲು ಸಾಧ್ಯ. ಸಾಹಿತಿಗಳು, ಲೇಖಕರು, ಕವಿಗಳು ಆಳಿ ಹೋಗಿರುವ ನಾಡಿನಲ್ಲಿ ಎಷ್ಟರ ಮಟ್ಟಿಗೆ ಅಸ್ತಿತ್ವ ಉಳಿಸಿಕೊಂಡಿದ್ದೇವೆನ್ನುವುದು ನಮ್ಮ ಮುಂದಿರುವ ಪ್ರಶ್ನೆ? ಕನ್ನಡದಲ್ಲಿಯೇ ಫೇಲಾಗುವುದಾದರೆ ಕನ್ನಡ ಹೇಗೆ ಉಳಿಯುತ್ತೆ. ಪ್ರಾದೇಶಿಕ ಭಾಷೆ ಅತ್ಯಂತ ಶ್ರೀಮಂತವಾದುದು. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಸಿಕ್ಕಿರುವುದು ಸಂತೋಷದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಪರಮೇಶ್ವರಪ್ಪ, ಹೊಳಲ್ಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಎನ್.ಶಿವಮೂರ್ತಿ, ತಹಶೀಲ್ದಾರ್ ಬೀಬಿಫಾತಿಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ವಿಶ್ವನಾಥ್, ಪುರಸಭಾ ಸದಸ್ಯರುಗಳು ವೇದಿಕೆಯಲ್ಲಿದ್ದರು.