ಪಕ್ಷ ಕಟ್ಟುವಲ್ಲಿ ಕೈ ಬಲಪಡಿಸಿ: ಸಚಿವ ಡಿ.ಸುಧಾಕರ್

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಪಕ್ಷಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಬಲಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ, ನಗರ ಮತ್ತು ಗ್ರಾಮಾಂತರ ಮಂಡಲದ ವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪಕ್ಷದ ನಡೆ ಕಾರ್ಯಕರ್ತರ ಕಡೆ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಚುನಾವಣೆಗಳು ಬರುತ್ತಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬುವುದಕ್ಕಾಗಿ ಪಕ್ಷದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಗಿದೆ.

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಐದು ಉಚಿತ ಗ್ಯಾರೆಂಟಿಗಳಿಗೆ ವರ್ಷಕ್ಕೆ 57 ಸಾವಿರ ಕೋಟಿ ರೂ.ಗಳ ಖರ್ಚಾಗುತ್ತಿದೆ. ಬಿಜೆಪಿ.ಯವರು ಮೂರು ಲಕ್ಷ ಕೋಟಿ ರೂ.ಗಳ ಸಾಲ ಹೊರಿಸಿ ಹೋಗಿದ್ದಾರೆ. ಇವೆಲ್ಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಭಾಯಿಸಿಕೊಂಡು ಅಪ್ಪರ್ಭದ್ರಾ ಯೋಜನೆಗೆ 2600 ಕೋಟಿ ರೂ.ಗಳನ್ನು ಕೊಟ್ಟಿದ್ದಾರೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ಕೊಡಿ ಎಂದು ಡಿ.ಸುಧಾಕರ್ ಸೂಚಿಸಿದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ರಾಮಕೃಷ್ಣಪ್ಪ ಮಾತನಾಡಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಮ್ಮ ಪಕ್ಷ ಘೋಷಿಸಿದಂತೆ ಅಧಿಕಾರಕ್ಕೆ ಬಂದ ಕೂಡಲೆ ಐದು ಉಚಿತ ಗ್ಯಾರೆಂಟಿಗಳನ್ನು ರಾಜ್ಯದ ಜನರಿಗೆ ನೀಡಿತು. ಅದು ಪ್ರತಿ ಮನೆಗೆ ತಲುಪುತ್ತಿದೆಯೋ ಇಲ್ಲವೋ ಎನ್ನುವುದರ ಕಡೆ ಕಾರ್ಯಕರ್ತರು ನಿಗಾಹರಿಸಬೇಕು. ಎಲ್ಲಾ ಜಾತಿಯ ಬಡವರಿಗೆ ಪಕ್ಷದ ಯೋಜನೆಗಳು ಪ್ರಯೋಜನಕಾರಿಯಾಗಿದೆ. ಮುಂಬರುವ ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತರು ಸಜ್ಜಾಗಿ ಎಂದು ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ 25 ವರ್ಷಗಳ ನಂತರ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೆಂದರೆ ಕಾರ್ಯಕರ್ತರುಗಳೆ ಕಾರಣ. ಐವತ್ತು ಸಾವಿರ ಮತಗಳ ಅಂತರದಿಂದ ನೀವುಗಳು ನನ್ನನ್ನು ಗೆಲ್ಲಿಸಿದ್ದೀರ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಪಂಚ ಗ್ಯಾರೆಂಟಿಗಳಿಂದ ಬಡವರ ಜೀವನ ಸುಧಾರಣೆಯಾಗಿದೆ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಗ್ಯಾರೆಂಟಿಗಳನ್ನು ತಲುಪಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಸ್ಥಾನಮಾನಗಳು ಸಿಕ್ಕೆ ಸಿಗುತ್ತವೆ. ನಿರಾಸೆ ಬೇಡ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುವುದರಿಂದ ಪ್ರತಿ ವಾರ್ಡ್, ಪಂಚಾಯಿತಿ, ಬೂತ್ಗಳಿಗೆ ಭೇಟಿ ಕೊಡುತ್ತೇವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಿಮ್ಮ ಕೈಯಲ್ಲಿದೆ ಎಂದು ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ 2023 ರಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮವಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕರ್ತರ ಒಡನಾಡಿಯಾಗಿ ಕೆಲಸ ಮಾಡುತ್ತ ಅಹವಾಲುಗಳನ್ನು ಆಲಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಪ್ರಣಾಳಿಕೆಯಂತೆ ಎಲ್ಲವನ್ನು ಈಡೇರಿಸಿದೆ. ಪ್ರತಿ ವರ್ಷ ಒಂದು ವಿಧಾನಸಭೆ ಕ್ಷೇತ್ರಕ್ಕೆ 240 ಕೋಟಿ ರೂ.ಗಳು ಸಿಗುತ್ತಿದೆ. ಭಾರತದಲ್ಲಿ ಎಲ್ಲಿಯೂ ಇಂತಹ ಯೋಜನೆಗಳಿಲ್ಲ. ಕಾರ್ಯಕರ್ತರು ಮನಸ್ಸು ಮಾಡಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಚುನಾವಣೆಗಳಲ್ಲಿಯೂ ಪಕ್ಷಕ್ಕೆ ಗೆಲುವು ತಂದು ಕೊಡುವ ನಿಟ್ಟಿನಲ್ಲಿ ಈಗಿನಿಂದಲೆ ಸಿದ್ದರಾಗುವಂತೆ ಹೇಳಿದರು.

ಕಾಂಗ್ರೆಸ್ ಬೆಲೆ ಏರಿಸಿದೆ ಎಂದು ಬಿಜೆಪಿ. ಜನಾಕ್ರೋಶ ಯಾತ್ರೆ ನಡೆಸಿ ನಮ್ಮ ಪಕ್ಷದ ಬಗ್ಗೆ ಅಪ ಪ್ರಚಾರ ಮಾಡುತ್ತಿದೆ. ರಾಜ್ಯದಲ್ಲಿ ಎಲ್ಲಿಯೂ ಜನ ಆಕ್ರೋಶಗೊಂಡಿಲ್ಲ. ಪಕ್ಷದಲ್ಲಿ ಸ್ಥಾನಮಾನ ಸಿಗಲಿಲ್ಲವೆಂಬ ಮುನಿಸು ಬೇಡ. ಕಾಂಗ್ರೆಸ್ಗೆ 145 ವರ್ಷಗಳ ಇತಿಹಾಸವಿದೆ. ಬಿಜೆಪಿ.ಗೆ ಯಾವ ಇತಿಹಾಸವಿದೆ ಎಂದು ಪ್ರಶ್ನಿಸಿದರು?

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡುತ್ತ ಇದು ಚುನಾವಣೆ ವರ್ಷ. ಜಿಲ್ಲಾ ಪ0ಚಾಯಿತಿ, ತಾಲ್ಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆ ಕಾರ್ಯಕರ್ತರುಗಳ ಮೇಲಿದೆ. ಜಿಲ್ಲಾ ಪಂಚಾಯಿತಿಯಲ್ಲಿ ನಮ್ಮ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಬೇಕು. ಎಂದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಮಾತನಾಡಿ ಐದು ಉಚಿತ ಗ್ಯಾರೆಂಟಿಗಳು ಜನರಿಗೆ ಮುಟ್ಟಿದೆಯೋ ಇಲ್ಲವೋ ಎನ್ನುವುದನ್ನು ಮನೆ ಮನೆಗೆ ಭೇಟಿ ನೀಡಿ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಗ್ಯಾರೆಂಟಿ ಯೋಜನೆಗಳಿಗೆ ಪ್ರತಿ ವರ್ಷ 62 ಸಾವಿರ ಕೋಟಿ ರೂ.ಗಳು ಖರ್ಚಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಸರ್ಕಾರ ನುಡಿದಂತೆ ನಡೆದಿದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿ ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷವನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡುತ್ತ ಕಾರ್ಯಕರ್ತರಲ್ಲಿ ಕಿಂಚಿತ್ತು ಉತ್ಸಾಹ ಕಮ್ಮಿಯಾಗಿಲ್ಲ. ನಿಷ್ಟೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದಾರೆ. ಆಶ್ರಯ ಯೋಜನೆಯಡಿ ಒಂದು ಸಾವಿರ ಮನೆಗಳ ನಿರ್ಮಾಣಕ್ಕೆ ಬುನಾದಿ ಹಾಕಿ ನಿಲ್ಲಿಸಲಾಗಿದೆ. ಜನ ಮನೆಗಳಿಗೆ ಆಸೆಯಿಟ್ಟುಕೊಂಡಿರುವುದರಿಂದ ಮನೆಗಳನ್ನು ಪೂರ್ಣಗೊಳಿಸಿ ಚುನಾವಣೆಯಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಆದ್ಯತೆ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ವಿಜಯಕುಮಾರ್, ಆರ್.ಶಿವಣ್ಣ, ಕೆ.ಅನ್ವರ್ಪಾಷ, ಮುನಿರಾ ಎ.ಮಕಾಂದಾರ್, ಕೆ.ಡಿ.ಪಿ.ಸದಸ್ಯ ಕೆ.ಸಿ.ನಾಗರಾಜ್ ಇವರುಗಳು ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷರುಗಳಾದ ಕುಮಾರ್ಗೌಡ, ಡಿ.ಟಿ.ವೆಂಕಟೇಶ್, ಎಸ್.ಎನ್.ರವಿಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ಖುದ್ದೂಸ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ಸುದರ್ಶನ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಮಂಜಪ್ಪ, ಸಿ.ಟಿ.ಕೃಷ್ಣಮೂರ್ತಿ, ಹೆಚ್.ಸಿ.ನಿರಂಜನಮೂರ್ತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಗೀತ ನಂದಿನಿಗೌಡ, ಮೋಕ್ಷರುದ್ರಸ್ವಾಮಿ, ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಎಸ್.ಜಯಣ್ಣ, ಎಸ್ಟಿ.ವಿಭಾಗದ ಅಧ್ಯಕ್ಷ ಮಂಜುನಾಥ್, ಪ್ರಕಾಶ್ ರಾಮನಾಯ್ಕ, ಹನೀಸ್, ಜಿ.ವಿ.ಮಧುಗೌಡ, ಮೋಹನ್ ಪೂಜಾರಿ, ಯು.ಲಕ್ಷ್ಮಿಕಾಂತ್ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon