ಬೆಳಗಾವಿ : ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 13 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ಆಗಬಾರದ ದುರ್ಘಟನೆ. ನಾನು ಈಗ ಬದುಕಿನ ಕೊನೆಯ ಹಂತವನ್ನು ನೋಡಿ ಹೋರಾಟ ಮಾಡಿ ಉಳಿದಿದ್ದೇನೆ. ಇದಕ್ಕೆ ನನ್ನ ಹಿರಿಯರ ಆಶೀರ್ವಾದ ಹಾಗೂ ತಂದೆ ತಾಯಿ ಆಶೀರ್ವಾದವೇ ಕಾರಣ. ಬಹಳಷ್ಟು ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ರಾಜ್ಯದ ಮಠಾಧೀಶರು, ಪೂಜ್ಯರು ಶೀಘ್ರ ಗುಣಮುಖರಾಗಿ ಸದೃಢವಾಗಲು ಆಶೀರ್ವಾದ ನೀಡಿದರು. ಅದು ನನಗೆ ಬಹುಶಕ್ತಿ ಮತ್ತು ಧೈರ್ಯವನ್ನು ನೀಡಿತು,” ಎಂದು ಅವರು ಅಭಿಪ್ರಾಯಪಟ್ಟರು.
“ರಾಜ್ಯದ ಸಿಎಂ, ಡಿಸಿಎಂ, ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಬಂದು ನನ್ನ ಆರೋಗ್ಯ ವಿಚಾರಿಸಿದರು. ಅವರು ಶೀಘ್ರ ಚೇತರಿಕೆಯಾಗುವಂತೆ ಹಾರೈಸಿದ್ರು. ಸುರ್ಜೇವಾಲಾ ಅವರು ಕೂಡ ನನ್ನ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಅವರಲ್ಲಿ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಹೇಳುತ್ತೇನೆ,” ಎಂದು ಹೆಬ್ಬಾಳ್ಕರ್ ಹೇಳಿದರು.
“ಮುಖ್ಯವಾಗಿ ಡಾ. ರವಿ ಪಾಟೀಲ್ ಅವರ ವೈದ್ಯರ ತಂಡಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕ್ಷೇತ್ರದ ಎಲ್ಲ ಮತದಾರರು, ನನಗಾಗಿ ಪೂಜೆ ಸಲ್ಲಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆ ಕ್ಷಣ ನನಗೆ ಪುನರ್ಜನ್ಮದ ಅನುಭವವಾಗಿದೆ,” ಎಂದು ಅವರು ಭಾವೋದ್ಗಾರದಿಂದ ಹೇಳಿದರು.
“ನನಗೆ ಇನ್ನೂ ದೊಡ್ಡ ಜವಾಬ್ದಾರಿ ಇದೆ. ಮಾರ್ಚ್ನಲ್ಲಿ ಬಜೆಟ್ ಮಂಡನೆ ಮಾಡಬೇಕಾಗಿದೆ. ನಾನು ಈಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸಗಳನ್ನು ನಿರ್ವಹಿಸುತ್ತಿದ್ದೇನೆ. ಆದರೆ ವೈದ್ಯರು ಇನ್ನೂ ಮೂರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ,” ಎಂದು ಹೆಬ್ಬಾಳ್ಕರ್ ಮಾಹಿತಿ ನೀಡಿದರು.