ಚಿತ್ರದುರ್ಗ : ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ 25 ರಷ್ಟು ಹಾಜರಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ದಾವಣಗೆರೆ ವಿಶ್ವವಿದ್ಯಾನಿಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂತೆಬೆನ್ನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಹಾಗೂ ಮಹಿಳೆಯರ 13 ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ತಂಡದ ಆಯ್ಕೆ ಉದ್ಗಾಟಿಸಿ ಮಾತನಾಡಿದರು.
ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಶೇ. 2 ರಷ್ಟು ಮೀಸಲಾತಿ, ಹತ್ತು ಗ್ರೇಸ್ ಅಂಕ ಸಿಗಲಿದೆ. ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 65 ಎಕರೆ ಜಾಗವಿದ್ದು, ಸಿಂಥೆಟಿಕ್ ಟ್ರ್ಯಾಕ್ನೊಂದಿಗೆ ವಿಶಾಲವಾದ ಕ್ರೀಡಾಂಗಣ ನಿರ್ಮಿಸಲಾಗುವುದು. ಆಧುನಿಕ ಜೀವನದಲ್ಲಿ ಎಲ್ಲದರಲ್ಲೂ ಒತ್ತಡವಿದೆ. ರೋಗಗಳನ್ನು ತಡೆಗಟ್ಟಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಓದಿನ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ಕೊಡಿ ಎಂದು ಕ್ರೀಡಾಪಟುಗಳಿಗೆ ಶಾಸಕರು ಕರೆ ನೀಡಿದರು.
ಸ್ಪರ್ಧಾತ್ಮಕ ಯುಗವಾಗಿರುವುದರಿಂದ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಭಾಗವಹಿಸಬೇಕಾದರೆ ಸತತ ಅಭ್ಯಾಸವಿರಬೇಕು. ನಮ್ಮ ರಾಜ್ಯದ ಕ್ರೀಡಾಪಟುಗಳು ಒಲಂಪಿಕ್ಸ್ನಲ್ಲಿ ಭಾಗವಹಿಸಿ ಚಿನ್ನದ ಪದಕ ತಂದವರಿಗೆ ಆರು ಕೋಟಿ ರೂ. ಬೆಳ್ಳಿ ಪದಕ ಗೆದ್ದವರಿಗೆ ನಾಲ್ಕು ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಲಿದೆ.
ರಾಜಕಾರಣಿಗಳು, ನಟರು, ಅಧಿಕಾರಿಗಳಾಗಬಹುದು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳಾಗಿ ದೇಶಕ್ಕೆ ಗೌರವ ತರುವಂತ ಕ್ರೀಡಾಪಟುಗಳಾಗುವುದು ಕಷ್ಟ. ಹಾಗಾಗಿ ನೀವುಗಳು ಆ ನಿಟ್ಟಿನಲ್ಲಿ ಬೆಳೆಯಬೇಕೆಂದು ಹಾರೈಸಿದರು.
ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರುಗಳಾದ ಹೆಚ್.ತಿಪ್ಪೇಸ್ವಾಮಿ, ಡಾ.ಬಿ.ಕೆ.ಪ್ರೇಮ, ಪ್ರಶಾಂತ್ ಆರ್.ಟಿ. ಡಾ.ಪ್ರಶಾಂತ್ ಎನ್.ಸಿ. ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಗಿರಿಸ್ವಾಮಿ ಹೆಚ್. ಇವರುಗಳು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.