ಹೊಳಲ್ಕೆರೆ : ಹಳ್ಳಿಗಾಡಿನ ಬಡ ರೋಗಿಗಳಿಗೂ ಉತ್ತಮವಾದ ಚಿಕಿತ್ಸೆ ಸಿಗಲಿ ಎನ್ನುವ ಉದ್ದೇಶದಿಂದ ಗುಣಮಟ್ಟದ ಆಸ್ಪತ್ರೆ, ಸಿಬ್ಬಂದಿಗೆ ವಸತಿ ಗೃಹಗಳನ್ನು ಕಟ್ಟಿಸಲಾಗುತ್ತಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಎರಡು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೈದ್ಯರ, ದಾದಿಯರ ಮತ್ತು ಡಿ.ಗ್ರೂಪ್ ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಎಲ್ಲರೂ ಬೆಂಗಳೂರು, ದಾವಣಗೆರೆ, ಮಣಿಪಾಲ್ಗೆ ಹೋಗಿ ಚಿಕತ್ಸೆ ಪಡೆಯಲು ಆಗುವುದಿಲ್ಲ. ವೈದ್ಯರು ದಿನದ 24 ಗಂಟೆಯೂ ರೋಗಿಗಳಿಗೆ ಕೈಗೆ ಸಿಗುವಂತಾಗಬೇಕು. ಅದಕ್ಕಾಗಿಯೇ ವಸತಿ ಗೃಹಗಳನ್ನು ನಿರ್ಮಿಸುತ್ತಿದ್ದು, ಇನ್ನು ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಪಟ್ಟಣದ ಕೆರೆ ಸಮೀಪ ಡಬ್ಬಲ್ ರಸ್ತೆಯಾಗಿದೆ. ಸಾಸಲು ಸರ್ಕಲ್ನಿಂದ ಹಿರೇಬೆನ್ನೂರು ಸರ್ಕಲ್ವರಗೆ ರಸ್ತೆಗೆ ನೂರು ಕೋಟಿ ರೂ.ಗಳನ್ನು ನೀಡಿದ್ದೇನೆ. ಬ್ರಿಡ್ಜ್ಗೆ ಒಂದು ಕೋಟಿ ರೂ. ಸಿ.ಸಿ.ರಸ್ತೆಗೆ ಅರವತ್ತು ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ. ಅಧಿಕಾರ, ಹಂತಸ್ತು ಯಾವುದು ಶಾಶ್ವತವಲ್ಲ. ಇರುವಷ್ಟು ದಿನ ಕ್ಷೇತ್ರದ ಜನರಿಗೆ ಒಳ್ಳೆಯದು ಮಾಡಬೇಕೆನ್ನುವ ಬದ್ದತೆ ಇಟ್ಟುಕೊಂಡಿರುವ ರಾಜಕಾರಣಿ ನಾನು. 35 ಕೋಟಿ ರೂ.ವೆಚ್ಚದಲ್ಲಿ ಫ್ಲೈ ಓವರ್, ಭೂತಪ್ಪನ ಗುಡಿ ಹತ್ತಿರವೂ ಫ್ಲೈಓವರ್ ಕಟ್ಟಿಸುತ್ತೇನೆ. ಶಾಲಾ-ಕಾಲೇಜು, ಕೆರೆ ಕಟ್ಟೆ, ಸಿ.ಸಿ.ರಸ್ತೆ, ಆಸ್ಪತ್ರೆ, ಚೆಕ್ಡ್ಯಾಂಗಳ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸ್ವಂತ ಖರ್ಚಿನಿಂದ ಸರ್ಕಾರಿ ಬಸ್ಗಳ ವ್ಯವಸ್ಥೆ ಕಲ್ಪಿಸಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತ ಕೆಲಸ ಮಾಡಿಲ್ಲ. ಇನ್ನು ಆರು ತಿಂಗಳೊಳಗೆ ತಾಲ್ಲೂಕಿನಲ್ಲಿರುವ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗುವುದೆಂದು ಭರವಸೆ ನೀಡಿದರು.
ಕ್ಷೇತ್ರಾದ್ಯಂತ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತರಲು 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ನೀರಿನ ಮಧ್ಯೆ ನಲವತ್ತು ಅಡಿ ಆಳದಲ್ಲಿ ಪಿಲ್ಲರ್ ಕೂರಿಸಿ ಮೋಟಾರ್ ಅಳವಡಿಸಲಾಗುವುದು. ಹಾಲೇನಹಳ್ಳಿ ಸಮೀಪ ಅರವತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಹಾಕಿ ಇನ್ನು ಮೂವತ್ತು ವರ್ಷಗಳ ಕಾಲ ನೀರಿಗೆ ತೊಂದರೆಯಿಲ್ಲದಂತೆ ನೋಡಿಕೊಳ್ಳಲಾಗುವುದು. ಅದೆ ರೀತಿ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದು ನೂರು ಕೋಟಿ ರೂ.ವೆಚ್ಚದಲ್ಲಿ ನಾಲ್ಕು ನೂರು ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಪವರ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು. ತೆಂಗು ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ರೈತರಿಗೆ ಇನ್ನು ನೂರು ವರ್ಷಗಳ ಕಾಲ ಕರೆಂಟ್ ಸಮಸ್ಯೆಯಾಗುವುದಿಲ್ಲ ಎಂದರು.
ಭರಮಸಾಗರದಲ್ಲಿ ಮೊದಲನೆ ಬಾರಿಗೆ ಶಾಸಕನಾದಾಗ ಸರ್ಕಾರದಲ್ಲಿ ಹಣವಿರುತ್ತಿರಲಿಲ್ಲ. ಅಂತಹ ಕಷ್ಟದ ಕಾಲದಲ್ಲಿಯೇ ಅನುದಾನ ತಂದು ಎಲ್ಲಾ ಹಳ್ಳಿಗಳಲ್ಲೂ ಸಿಮೆಂಟ್ ರಸ್ತೆ ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೂ ನನ್ನನ್ನು ಗೆಲ್ಲಿಸಿದರು. ಮೂವತ್ತು ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ.
ನಾನು ಮಂತ್ರಿಯಲ್ಲ. ಸಾಧಾರಣ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲು-ಇರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಗುಂಜಿಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ದಾಸಪ್ಪ, ಉಪಾಧ್ಯಕ್ಷ ನವೀನ್ಕುಮಾರ್, ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ
ಪಿ.ಎಸ್.ಮೂರ್ತಿ, ಗಂಗಣ್ಣ, ಆನಂದಪ್ಪ, ಜಗದೀಶ್, ಗುರುಸ್ವಾಮಿ, ಗೋವಿಂದಪ್ಪ, ಓಂಕಾರಪ್ಪ, ಖಲೀಲ್, ರುದ್ರಣ್ಣ, ಡಾ.ಪ್ರದೀಪ್, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.