ಹೊಳಲ್ಕೆರೆ : ತಾಲ್ಲೂಕಿನಾದ್ಯಂತ ಎಲ್ಲಾ ಕಡೆ ತಿರುಗಾಡಿ ಎಲ್ಲೆಲ್ಲಿ ಏನು ಸೌಲಭ್ಯಗಳ ಅವಶ್ಯಕತೆಯಿದೆ ಎನ್ನುವುದನ್ನು ಮನಗಂಡು ಕ್ಷೇತ್ರದ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಹಳವುದರ ಗ್ರಾಮದಲ್ಲಿ ನೂತನ ಉಪ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವೈದ್ಯರು ಇಲ್ಲಿಯೇ ವಾಸ್ತವ್ಯವಿರಲಿ ಎನ್ನುವ ಕಾರಣಕ್ಕಾಗಿ ಐದುವರೆ ಕೋಟಿ ರೂ.ವೆಚ್ಚದಲ್ಲಿ ವಸತಿ ಗೃಹ ಕಟ್ಟಿಸಲಾಗುವುದು. ಹಿರಿಯೂರಿನ ವಾಣಿವಿಲಾಸಸಾಗರದಿಂದ ಈ ಊರಿಗೂ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಬಡ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಊರುಗಳಿಗೆ ಹೋಗಬೇಕಾದ ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ವಾಹನಗಳಿಲ್ಲವೆಂದು ಹೇಳಬಾರದು. ಅದಕ್ಕಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಅಂಬ್ಯುಲೆನ್ಸ್ ವಾಹನ ಕೊಟ್ಟಿದ್ದೇನೆ ಎಂದರು.
ಒಂದೊಂದು ಊರಿಗೆ ಐದಾರು ಶಾಲೆಗಳನ್ನು ಕಟ್ಟಿಸಿದ್ದೇನೆ. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸ್ವಂತ ಖರ್ಚಿನಿಂದ ಬಸ್ಗಳನ್ನು ನೀಡಿದ್ದೇನೆ. ಚಾಲಕ, ಕಂಡಕ್ಟರ್ಗೂ ಕೈಯಿಂದ ಸಂಬಳ ಕೊಡುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಪುಣ್ಯಸಾರ್ಥಕ ಕೆಲಸ ಮಾಡಿಲ್ಲ ಎಂದರು.
ದೇವಸ್ಥಾನ ಕಟ್ಟಿಸಿದ್ದೇನೆ. ಉತ್ತಮ ಗುಣಮಟ್ಟದ ರಸ್ತೆ, ಕೆರೆ ಕಟ್ಟೆಗಳ ದುರಸ್ಥಿಯಾಗಿದೆ. ಸಿರಿಗೆರೆಯಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗೆ ಮುಂದಿನ ತಿಂಗಳು ಒಂದು ಬಸ್ ನೀಡುತ್ತೇನೆಂದು ಭರವಸೆ ಕೊಟ್ಟರು. ತಿಪ್ಪೇಸ್ವಾಮಿ, ನವೀನ್, ಸಿದ್ದಣ್ಣ, ಲಿಂಗರಾಜ್, ಸಿದ್ದಣ್ಣ ಮತ್ತಿತರರು ಭಾಗವಹಿಸಿದ್ದರು.