ಚಿತ್ರದುರ್ಗ: ಜಿಲ್ಲೆಯ ಇತಿಹಾಸ, ಸಂಸ್ಕೃತಿ ಹಾಗೂ ಸಾಹಿತ್ಯ ಪರಂಪರೆಯನ್ನು ಸಾರುವಲ್ಲಿ 33ನೇ ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿದೆ ಎಂದು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ವಿ.ಪಿ. ಬಡಾವಣೆಯ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಫಲ-ಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.
ಫಲಪುಷ್ಪ ಪ್ರದರ್ಶನದಲ್ಲಿ ರಾಜ್ಯದ ಮತ್ತು ಜಿಲ್ಲೆಯ ಸಾಧಕರ ಪರಿಚಯವನ್ನು ಸಾರ್ವಜನಿಕರಿಗೆ ಮಾಡಿಕೊಡಲಾಗುತ್ತಿದೆ. ಜಿಲ್ಲೆಯ ಮತ್ತು ನಾಡಿನ ಹೆಸರಾಂತ ಸಾಹಿತಿ ಬಿ.ಎಲ್.ವೇಣು ಅವರ ಪ್ರತಿಮೆ ಮತ್ತು ಅವರ ಕಾದಂಬರಿ, ಕೃತಿಗಳು, ಕೊಡುಗೆಗಳನ್ನು ಕಲ್ಲಿನಲ್ಲಿ ಚಿತ್ರಿಸಿರುವುದು ಅಮೋಘವಾಗಿದೆ. ಹೂವಿನಲ್ಲಿ ನಾಯಕನಹಟ್ಟಿ ಶ್ರೀ ಕ್ಷೇತ್ರದ ಶ್ರೀ ತಿಪ್ಪೇರುದ್ರಸ್ವಾಮಿ ಹೊರ ಮಠ, ಒಳ ಮಠ ಸುಂದರವಾಗಿದೆ. ಇನ್ನೂ ಐತಿಹಾಸಿಕ ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕನ ಚಿತ್ರಗಳು ಗಿಡ ಮರಗಳನ್ನು ಪ್ರೀತಿಯನ್ನು ತೋರಿಸುತ್ತಿದೆ ಎಂದರು. ರೈತರು ಬೆಳೆದಿರುವ ಬೆಳೆಗಳಲ್ಲಿ ಉತ್ತಮವಾಗಿ ಬೆಳೆದಿರುವ ಆಯ್ದ ಬೆಳೆಗಳ ಪ್ರದರ್ಶನದಿಂದ ರೈತರಿಗೆ ಪ್ರೇರಪಣೆಯಾಗಲಿದೆ. ಇಂತಹ ಮೇಳಗಳಿಂದ ರೈತರಿಗೆ ಹೊಸ ಪ್ರಯೋಗ ಮಾಡಲು ಅನುಕೂಲವಾಗಲಿದೆ. ಫಲಪುಷ್ಪ ಜೊತೆಗೆ ವಿವಿಧ ಜಾತಿಯ ಹೂ, ಹಣ್ಣು, ಅಲಂಕಾರಿಕ ಗಿಡಗಳನ್ನು ನೋಡಬಹುದಾಗಿದೆ. ಮೂರು ದಿನವು ಸಹ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಫಲ ಪುಷ್ಪ ಪ್ರದರ್ಶನ ಕಣ್ತುಂಬಿಕೊಂಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನಕ್ಕೆ ಸಿಎಂ ಮತ್ತು ಡಿಸಿಎಂ ಅವರಿಗೆ ಮನವಿ ಮಾಡಲಾಗಿದೆ. ಭದ್ರಾ ಯೋಜನೆಯಿಂದ ಕೆರೆಗಳಿಗೆ ನೀರು ಹರಿಯುವುದರಿಂದ ರೈತರಿಗೆ ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿದೆ. ಜಿಲ್ಲೆಯ ಜನರ ಕನಸಾಗಿರುವ ಭದ್ರಾ ನೀರನ್ನು ಮಾರ್ಚ್ ಅಂತ್ಯದೊಳಗೆ ಪ್ರಾಯೋಗಿಕವಾಗಿ ಹರಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಒತ್ತಡದ ಬದುಕಿನಲ್ಲಿ ಇಂತಹ ಫಲಪುಷ್ಪ ಪ್ರದರ್ಶನ ಜನರ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಮದಕರಿ ನಾಯಕ, ಓನಕೆ ಓಬವ್ವ ನಾಡಿನಲ್ಲಿ ಈ ಮೇಳದಲ್ಲಿ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಕಲಾಕೃತಿಯ ಒಳಮಠ, ಹೊರ ಮಠ ಇತಿಹಾಸ ಸಾರುತ್ತಿದೆ. ಸಾರ್ವಜನಿಕರಲ್ಲಿ ಫಲಪುಷ್ಪ ಪ್ರದರ್ಶನ ಸಂತಸವನ್ನು ಉಂಟು ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ, ತೋಟಗಾರಿಕೆ ಜಂಟಿ ಕಾರ್ಯದರ್ಶಿ ಗಿರೀಶ್, ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ, ಜಿ.ಪಂ. ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಬಾಬುರೆಡ್ಡಿ, ತೋಟಗಾರಿಕೆ ಸಂಘದ ರೀನಾ ವೀರಭದ್ರಪ್ಪ, ಸುಮನ ಅಂಗಡಿ, ಸುಮನ ತಿಮ್ಮಾರೆಡ್ಡಿ, ಶ್ವೇತಾ, ಸೇರಿದಂತೆ ಮತ್ತಿತರರು ಇದ್ದರು

































