ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರನ್ನು ಗುರಿಯಾಗಿಸಿಕೊಂಡು ‘ಸುಪಾರಿ’ (ಗುತ್ತಿಗೆ) ಹತ್ಯೆ ಸಂಚು ರೂಪಿಸಲಾಗಿದೆ ಎಂಬ ಆರೋಪದ ಮೇಲೆ ತುಮಕೂರು ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ರಾಜೇಂದ್ರ ಹತ್ಯೆಗೆ ರೌಡಿಶೀಟರ್ ಸೋಮ ಎಂಬಾತ ಸಂಚು ನಡೆಸಿದ್ದ ಬಗ್ಗೆ ಸೋಮು ಆಪ್ತೆ ಪುಷ್ಪಾ ಹಾಗೂ ರಾಜೇಂದ್ರ ಆಫ್ತ ರಾಕಿ ನಡೆಸಿರುವ 18 ನಿಮಿಷಗಳ ಮಾತುಕತೆ ಆಡಿಯೋ ಬಹಿರಂಗವಾಗಿದ್ದು, ಇದು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಇದರ ಬೆನ್ನಲ್ಲೇ ಆರೋಪಿ ನಂ.1 ಸೋಮು, ಪುಷ್ಪಾ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ದೂರು ಕೊಟ್ಟ ನಂತರ ಸೋಮು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಆತನನ್ನು ನೆಲಮಂಗಲ ಬಳಿ ವಶಕ್ಕೆ ಪಡೆದಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ ಪುಷ್ಪಾಳನ್ನೂ ವಶಕ್ಕೆತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಪುಷ್ಪಾ ಮತ್ತು ರಾಕಿ ಎಂಬುವರ ಮಧ್ಯೆ ಡಿಸೆಂಬರ್‌ನಲ್ಲಿ ರಾಜೇಂದ್ರ ಹತ್ಯೆ ಸುಪಾರಿ ಕುರಿತಂತೆ ಸಂಭಾಷಣೆ ನಡೆದಿತ್ತು. ಹತ್ಯೆಗೆ ತುಮಕೂರು ಬಳಿಯ ಜೈಪುರದ ಸೋಮು ಎಂಬಾತ ಸುಪಾರಿ ಪಡೆದಿದ್ದ ಎನ್ನಲಾಗಿದೆ.
ಆಡಿಯೋ ಸಂಭಾಷಣೆಯಲ್ಲಿ, ಸೋಮುನ ಆಪ್ತಯಾಗಿರುವ ಪುಷ್ಪಾ, ಸೋಮು ಪ್ಲಾನ್ ಅನ್ನು ರಾಜೇಂದ್ರ ಅವರ ಬೆಂಬಲಿಗ ರಾಕಿಗೆ ಫೋನ್‌ನಲ್ಲಿ ತಿಳಿಸಿದ್ದಳು. ಇದನ್ನು ರೆಕಾರ್ಡ್ ಮಾಡಿಕೊಂಡಿದ್ದ ರಾಕಿ, ಈ ಸಂಭಾಷಣೆ ಆಡಿಯೋವನ್ನು ರಾಜೇಂದ್ರಗೆ ನೀಡಿದ್ದ. ಇದೇ ಆಡಿಯೋದ ಪೆನ್‌ಡ್ರೈವ್‌ನ್ನು ರಾಜೇಂದ್ರ ಅವರು ದೂರಿನ ವೇಳೆ ಪೊಲೀಸರಿಗೆ ನೀಡಿದ್ದರು.
ಆಡಿಯೋದಲ್ಲಿ ಏನಿದೆ?
ಆಡಿಯೋದಲ್ಲಿ ಮಾತನಾಡಿರುವ ಪುಷ್ಪಾ, ಪ್ರಭಾವಿ ವ್ಯಕ್ತಿಯಿಂದ ರಾಜೇಂದ್ರ ಕೊಲೆ ಮಾಡಲು ಸೋಮುಗೆ 75 ಲಕ್ಷ ರೂ. ಸುಪಾರಿಗೆ ಬಂದಿತ್ತು. ಇದಕ್ಕಾಗಿ 5 ಲಕ್ಷ ರೂ. ಹಣ ನೀಡಿದ್ದರು. ಇದು ನಿಜ. ಬೇಕಾದರೆ ಸೋಮನನ್ನು ಪೊಲೀಸರು ವಿಚಾರಿಸಿದರೆ ಎಲ್ಲಾ ಹೊರಬರುತ್ತದೆ. ಈ ವಿಚಾರ ಬೇಕಾದರೆ ರಾಜೇಂದ್ರಗೆ ನಾನು ಹೇಳುತ್ತೇನೆ. ಅವರ ಬಳಿ ಕರೆದುಕೊ೦ಡು ಹೋಗು ಎಂದು ತಿಳಿಸಿದ್ದಾಳೆ.
ಕಳೆದ ನವೆಂಬರ್ ತಿಂಗಳಿನಲ್ಲಿ ರಾಜೇಂದ್ರ ಅವರ ಪುತ್ರಿಯ ಹುಟ್ಟುಹಬ್ಬ ಸಮಾರಂಭದಲ್ಲಿ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರು ಹುಡುಗರನ್ನು ಕಳುಹಿಸಿದ್ದು ಕೂಡ ಸೋಮು.’ಇದಲ್ಲದೆ ಜೈಪುರದ ಇನ್ನೊಬ್ಬ ರೌಡಿ ಶೀಟರ್‌ನನ್ನು ಕೊಲ್ಲುವುದಾಗಿ ಸೋಮು ಹೇಳಿದ್ದಾನೆ. ಇದಕ್ಕಾಗಿಯೇ ಬೆಂಗಳೂರಿನ ಕಲಾಸಿಪಾಳ್ಯದಲ್ಲಿರುವ ಇಬ್ಬರು ತಮಿಳು ಹುಡುಗರನ್ನು ಕೂಡ ಕರೆಸಿಕೊಂಡಿದ್ದಾನೆ’ ಎಂದು ಆಡಿಯೋ ಸಂಭಾಷಣೆಯಲ್ಲಿದೆ.
ಸೋಮುಗೆ ರೂ.5 ಲಕ್ಷ ದುಡ್ಡು ಬಂದಿರುವುದು ದೇವರ ಸಾಕ್ಷಿಯಾಗಿಯೂ ನಿಜ. ಮನು ಎಂಬಾತನ ಅಕೌಂಟ್ ಗೆ ಫೋನ್ ಪೇ ಮೂಲಕ ಹಣ ಹಾಕಲಾಗಿದೆ ಎಂದು ಮಹಿಳೆ ಹೇಳಿರುವುದು ತಿಳಿದುಬಂದಿದೆ.
ಈ ನಡುವೆ ಆಡಿಯೋ ರಾಜ್ಯದಲ್ಲಿ ತೀವ್ರ ಸಂಚಲ ಮೂಡಿಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಪೊಲೀಸ್ ಇವಾಱೆ ಗಂಭೀರವಾಗಿ ಪರಿಗಣಿಸಿದ್ದೆ, ಪ್ರಕರಣ ತನಿಖೆಗಾಗಿ ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ಜಿ ಅವರನ್ನು ತನಿಖಾಧಿಕಾರಿ (ಐಒ)ಯನ್ನಾಗಿ ಮಾಡಿದೆ. ಆದರೆ, ಕೆಲವು ಕಾರಣಗಳಿಂಗ ಅವರು ಪ್ರಕರಣವನ್ನು ಕೈಗೆತ್ತಿಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅವರು, ಮಾಗಡಿ ಡಿವೈಎಸ್ಪಿ ಪ್ರವೀಣ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ನಿಯೋಜಿಸಿದ್ದಾರೆಂದು ತಿಳಿದುಬಂದಿದೆ.