ಮುಂಬೈ ಕರಾವಳಿಯಲ್ಲಿ ನೀಲಕಮಲ್ ಎಂಬ ಪ್ರಯಾಣಿಕ ದೋಣಿ ಮತ್ತು ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ ಹೊಡೆದು 3 ನೌಕಾಪಡೆ ಸಿಬ್ಬಂದಿ ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 101 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ನೀಲಕಮಲ್ ಹೆಸರಿನ ದೋಣಿ ಗೇಟ್‌ವೇ ಆಫ್ ಇಂಡಿಯಾದಿಂದ ಮುಂಬೈ ಕರಾವಳಿಯ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಆಗ ನೌಕಾಪಡೆಯ ಸ್ಪೀಡ್ ಬೋಟ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಅಪಘಾತದ ಬಳಿಕ ದೋಣಿಯು ನೀರಿನಲ್ಲಿ ಮುಳುಗುತ್ತಾ ಮಗುಚಿಕೊಳ್ಳಲು ಶುರುವಾಗಿದೆ. ದೋಣಿಯಲ್ಲಿದ್ದ ಬಹುತೇಕರನ್ನು ರಕ್ಷಿಸಲಾಗಿದೆ.
ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ನಾಪತ್ತೆಯಾಗಿರುವವರಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮುಂಬೈನಲ್ಲಿ ದೋಣಿ ದುರಂತದಲ್ಲಿ ಮೃತರಾದ ಪ್ರತಿಯೊಬ್ಬರ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಇದೀಗ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇನ್ನು ಈ ದುರಂತದಲ್ಲಿ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.