ನವದೆಹಲಿ : ಹಬ್ಬಗಳ ನೆಪದಲ್ಲಿ ಆಗುತ್ತಿದ್ದ ದುಂದು ವೆಚ್ಚಕ್ಕೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ. ಹಬ್ಬಗಳಿವೆ ಎಂದು ಸರ್ಕಾರದ ಹಣದಿಂದ ಉಡುಗೊರೆಗಳನ್ನು ಕೊಡುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.
ದೀಪಾವಳಿ ಸೇರಿ ಯಾವುದೇ ಹಬ್ಬಕ್ಕೆ ಸಾರ್ವಜನಿಕ ಹಣ ಬಳಕೆಗೆ ನಿರ್ಬಂಧ ಹೇರಲಾಗಿದೆ. ಸೆ.19ರಂದು ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.ಈ ಹಿಂದೆಯೂ ಕೇಂದ್ರ ಸರ್ಕಾರ ಇಂತಹ ನಿರ್ದೇಶನ ನೀಡಿತ್ತು, ಆದರೆ ಅದು ಸಮರ್ಪಕವಾಗಿ ಪಾಲನೆಯಾಗದ ಹಿನ್ನೆಲೆ ಮತ್ತೆ ಸುತ್ತೋಲೆ ಹೊರಡಿಸಲಾಗಿದೆ. ಈ ಬಾರಿ ಆದೇಶವನ್ನು ಕಡ್ಡಾಯವಾಗಿ ಪಾಲಿಸಲು ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಉಡುಗೊರೆ ನೆಪದಲ್ಲಿ ಆಗುವ ದುಂದುವೆಚ್ಚಕ್ಕೆ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಲಾಗಿದೆ.
ಯಾವುದೇ ಹಬ್ಬದ ಸಮಯದಲ್ಲಿ ಉಡುಗೊರೆಗಳಿಗಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡದಂತೆ ಹಣಕಾಸು ಸಚಿವಾಲಯವು ಎಲ್ಲಾ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಭಾರತ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಇತರ ಅಂಗಗಳಿಂದ ದೀಪಾವಳಿ ಮತ್ತು ಇತರ ಹಬ್ಬಗಳಿಗೆ ಉಡುಗೊರೆಗಳು ಮತ್ತು ಸಂಬಂಧಿತ ವಸ್ತುಗಳಿಗೆ ಯಾವುದೇ ಖರ್ಚು ಮಾಡಲಾಗುವುದಿಲ್ಲ ಎಂಬುದನ್ನು ಈ ಸುತ್ತೋಲೆಯಲ್ಲಿ ಹೇಳುತ್ತದೆ.