ಗಾಂಧಿನಗರ: ʼʼಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಅಲ್ಲಿನ ಜನರೇ ಮುಂದೆ ಬರಬೇಕು. ಶಾಂತಿ, ಸಮಾಧಾನದಿಂದ ಬದುಕಿ ಇಲ್ಲದಿದ್ದರೆ ನಮ್ಮ ಶಸ್ತ್ರಾಸ್ತ್ರ ಎದುರಿಸಲು ಸಜ್ಜಾಗಿʼʼ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಚ್ಚರಿಕೆ ನೀಡಿದರು. ಪ್ರಧಾನಿಯಾಗಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾರತ ಸಾಧಿಸಿದ ಅಭಿವೃದ್ಧಿಯ ಬಗ್ಗೆ, ಆರ್ಥಿಕ ಪ್ರಗತಿಯ ಬಗ್ಗೆ ಗುಜರಾತ್ನ ಭುಜ್ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ಆಪರೇಷನ್ ಸಿಂದೂರ್ (Operation Sindoor) ಯಶಸ್ವಿಯಾದ ಬಳಿಕ ಇದೇ ಮೊದಲ ಬಾರಿಗೆ ಗುಜರಾತ್ಗೆ ಭೇಟಿ ನೀಡಿದ ಅವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.
ʼʼಪಾಕಿಸ್ತಾನದ ಪ್ರಜೆಗಳಿಗೆ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಭಯೋತ್ಪಾದನೆಯಿಂದ ನೀವು ಏನನ್ನು ಗಳಿಸಿದ್ದೀರಿ? ಭಾರತವನ್ನು ನೋಡಿ. ನಾವೀಗ ಜಪಾನ್ನನ್ನು ಹಿಂದಿಕ್ಕಿ ವಿಶ್ವದ 4ನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದೇವೆ. ನೀವೆಲ್ಲಿದ್ದೀರಿ?ʼʼ ಎಂದು ಪ್ರಶ್ನಿಸಿದರು.
ʼʼಪಾಕಿಸ್ತಾನಕ್ಕೆ ಅಂಟಿಕೊಂಡಿರುವ ಭಯೋತ್ಪಾದನೆಯ ಕಾಯಿಲೆಯನ್ನು ಗುಣಪಡಿಸಲು ಅಲ್ಲಿನ ಜನರೇ ಮುಂದೆ ಬರಬೇಕು. ನಿಮ್ಮ ಪಾಡಿಗೆ ನೀವಿದ್ದರೆ ಸರಿ. ಇಲ್ಲದಿದ್ದರೆ ನಮ್ಮ ಬುಲೆಟ್ ಸಜ್ಜಾಗಿದೆʼʼ ಎಂದು ಮೋದಿ ಹೇಳಿದರು.
ಭಯೋತ್ಪಾದನೆ ಪಾಕಿಸ್ತಾನದ ಉದ್ಯಮ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಣ್ಣಿಸಿದ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸರ್ಕಾರ, ಅಲ್ಲಿನ ಮಿಲಿಟರಿ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂದು ಜೈಶಂಕರ್ ಆರೋಪಿಸಿದ್ದರು. ಭಯೋತ್ಪಾದನೆಯು ಪಾಕಿಸ್ತಾನದ ನಗರಗಳಲ್ಲೇ ಬೆಳೆಯುತ್ತಿದೆ ಎನ್ನುವುದನ್ನು ಎಲ್ಲರೂ ಬಲ್ಲರು. ಇದರಲ್ಲಿ ಯಾವುದೇ ರಹಸ್ಯವಿಲ್ಲ ಎಂದಿದ್ದರು.
“ಭಾರತ ಪ್ರವಾಸೋದ್ಯಮ ದೃಷ್ಟಿಕೋನ ಹೊಂದಿದೆ. ಆದರೆ ಪಾಕಿಸ್ತಾನ ಭಯೋತ್ಪಾದನೆಯನ್ನೇ ಪ್ರವಾಸೋದ್ಯಮವೆಂದು ಪರಿಗಣಿಸಿದೆ. ಇದು ಜಗತ್ತಿಗೆ ತುಂಬಾ ಅಪಾಯಕಾರಿ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದವರು ನಿಮ್ಮ ಭವಿಷ್ಯವನ್ನು ನಾಶ ಪಡಿಸಿದ್ದಾರೆ” ಎಂದು ಮೋದಿ ತಿಳಿಸಿದರು.
ಇದಕ್ಕೂ ಮೊದಲು ಪ್ರಧಾನಿ ಮೋದಿ 50,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು.
“ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ನಾನು 15 ದಿನಗಳವರೆಗೆ ಕಾಯುತ್ತಿದ್ದೆ. ಆದರೆ ಭಯೋತ್ಪಾದನೆಯನ್ನೇ ಅದು ನೆಚ್ಚಿಕೊಂಡಿದೆ” ಎಂದು ಹೇಳಿದರು. “ಮೇ 9ರ ರಾತ್ರಿ ಪಾಕಿಸ್ತಾನ ಭಾರತದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಪ್ರಯತ್ನಿಸಿದಾಗ ನಮ್ಮ ಮಿಲಿಟರಿ 2 ಪಟ್ಟು ಬಲದಿಂದ ಪ್ರತೀಕಾರ ತೀರಿಸಿಕೊಂಡಿದೆ. ಜತೆಗೆ ಅವರ ವಾಯುನೆಲೆಗಳನ್ನು ನಾಶಪಡಿಸಿದೆ” ಎಂದು ವಿವರಿಸಿದರು.
ಭರ್ಜರಿ ರೋಡ್ ಶೋ
2 ದಿನಗಳ ಭೇಟಿಗಾಗಿ ವಡೋದರಕ್ಕೆ ಬಂದಿಳಿದ ಮೋದಿ ಅವರಿಗೆ ರೋಡ್ ಶೋ ಮೂಲಕ ಭರ್ಜರಿ ಸ್ವಾಗತ ಕೋರಲಾಯಿತು. ರಸ್ತೆಯ ಇಕ್ಕೆಲೆಗಳಲ್ಲಿ ನಿಂತ ಸಾವಿರಾರು ಮಂದಿ ಪುಷ್ಪಾರ್ಚನೆಗೈದರು. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತ್ತಿದ್ದ ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಅವರ ಕುಟುಂಬವು ರೋಡ್ಶೋನಲ್ಲಿ ಭಾಗವಹಿಸಿತ್ತು. ಈ ರೋಡ್ಶೋನಲ್ಲಿ ಪಾಲ್ಗೊಂಡಿದ್ದ ಖುರೇಶಿ ಅವರ ಕುಟುಂಬದ ಫೋಟೊವನ್ನು ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.