ಹೊಳಲ್ಕೆರೆ : ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣಕ್ಕಾಗಿ ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐದು ಕೋಟಿ ರೂ.ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೇವಲ ಸರ್ಕಾರಿ ನೌಕರಿಗಾಗಿ ಓದುವುಕ್ಕಿಂತ ಕೌಶಲ್ಯ ಶಿಕ್ಷಣ ಪಡೆದು ಸ್ವಾವಲಂಭಿಯಾಗಿ ಬದುಕಲು ಬೇಕಾದ ಆತ್ಮವಿಶ್ವಾಸ ಮೂಡಿಸಿಕೊಳ್ಳಿ. ಶಿಕ್ಷಣಕ್ಕಾಗಿ ಸರ್ಕಾರ ಇಷ್ಟೆಲ್ಲಾ ಸವಲತ್ತುಗಳನ್ನು ಕೊಡುತ್ತಿದೆ. ಉಪಯೋಗಿಸಿಕೊಂಡು ಗುರು-ಹಿರಿಯರು, ಪೋಷಕರು ಹಾಗೂ ಕಾಲೇಜಿಗೆ ಕೀರ್ತಿ ತರಬೇಕು. ತಂದೆ-ತಾಯಿಗಳು ನಿಮ್ಮ ಮೇಲೆ ವಿಶ್ವಾಸ ನಂಬಿಕೆಯಿಟ್ಟು ಕಾಲೇಜಿಗೆ ಕಳಿಸುತ್ತಾರೆ. ಸಾರ್ಥಕ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಚಿವ ಡಿ.ಸುಧಾಕರ್ ತಿಳಿಸಿದರು.
ಹಿರಿಯೂರು, ಚಿತ್ರದುರ್ಗದಲ್ಲಿ ಪಿ.ಜಿ.ಕೋರ್ಸ್ ಇದೆ. ಹೊಳಲ್ಕೆರೆಯಲ್ಲಿ ಏಕೆ ಇಲ್ಲ ಎಂದು ಪ್ರಶ್ನಿಸಿದ ಸಚಿವರು. ಸ್ನಾತಕೋತ್ತರ ಕೇಂದ್ರ ಆರಂಭಿಸುವಂತೆ ಶಿಕ್ಷಣ ಇಲಾಖೆ ಜೆ.ಡಿ.ಗೆ ಸೂಚಿಸಿದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ನೂತನ ಕಟ್ಟಡ ಮತ್ತು ಗ್ರಂಥಾಲಯಕ್ಕೆ 4.70 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುವುದು. ರ್ಯಾಂಕ್ ಪಡೆದ ಮಕ್ಕಳಿಗೆ ಆ.15 ರ ಸ್ವಾತಂತ್ರ್ಯ ದಿನಾಚರಣೆಯಂದು ಐವತ್ತು ಸಾವಿರ ರೂ.ಗಳ ಬಹುಮಾನ ಕೊಟ್ಟಿದ್ದೇನೆ. ಮುಂದಿನ ಸಾಲಿನಲ್ಲಿ ರ್ಯಾಂಕ್ ಬರುವವರಿಗೆ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ನಾಲ್ಕೂ ಕೋಟಿ ರೂ.ಗಳಲ್ಲಿ ಒಳಾಂಗಣ ಕ್ರೀಡಾಂಗಣ ಕಟ್ಟಿಸಿದ್ದೇನೆ. 2.50 ಕೋಟಿ ರೂ.ವೆಚ್ಚದಲ್ಲಿ ಈಜುಕೊಳ, ಹತ್ತು ಕೋಟಿ ರೂ.ಗಳಲ್ಲಿ ಸ್ಟೇಡಿಯಂ ನಿರ್ಮಾಣವಾಗಿದೆ. ಹೆಚ್ಚುವರಿಯಾಗಿ ಹದಿನೆಂಟು ಕೋಟಿ ರೂ.ಗಳನ್ನು ಖರ್ಚು ಮಾಡಿ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂಗಿಂತಲೂ ಸುಂದರವಾಗಿ ಕಟ್ಟಿಸಲಾಗುವುದು. ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ಗಳ ವ್ಯವಸ್ಥೆ ಕಲ್ಪಿಸಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕರು ಇಂತಹ ಪುಣ್ಯಸಾರ್ಥಕ ಕೆಲಸ ಮಾಡಿಲ್ಲ. ಇದರಿಂದ ಎಂ.ಎಂ.ಪ್ರೌಢಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆಂದು ನುಡಿದರು.
ಶಿವಮೊಗ್ಗ ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಕೇಶವ ಹೆಚ್. ತಹಶೀಲ್ದಾರ್ ವಿಜಯಕುಮಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ವಿಶ್ವನಾಥ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಸದಸ್ಯರುಗಳಾದ ಆರ್.ಅಶೋಕ್, ಪಿ.ಹೆಚ್.ಮುರುಗೇಶ್, ಬಸವರಾಜ್ ಯಾದವ್, ಡಿ.ಸಿ.ಮೋಹನ್, ಕಾಲೇಜಿನ ಪ್ರಾಚಾರ್ಯರಾದ ಡಾ.ಸಿ.ಕೆ.ಕೊಟ್ರಪ್ಪ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.