ಬೆಂಗಳೂರು : ಬೆಂಗಳೂರಿನಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ಚುರುಕಾಗಿರುವ ಮಳೆ ಗುಡುಗು, ಮಿಂಚು ಸಹಿತ ಸುರಿಯುತ್ತಿದೆ. ಮೊನ್ನೆ ಸುರಿದ ಮಳೆಯ ಅವಾಂತರ, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಾಗಲೇ ಮಂಗಳವಾರ ಬೆಳ್ಳಂಬೆಳ್ಳಗ್ಗೆ ಬರೋಬ್ಬರಿ 135 ಮಿಲಿ ಮೀಟರ್ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ನಗರಾದ್ಯಂತ ಇಂದು ಬೆಳಗ್ಗೆ ಸುರಿದ ಮಳೆ ವಿವರ ಹೀಗಿದೆ: ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರ ಒಂದರಲ್ಲೇ ಬರೋಬ್ಬರಿ 135 ಮಿಲಿಮೀಟರ್ ಮಳೆ ಆಗಿದೆ. ಉಳಿದಂತೆ ಕೆಂಗೇರಿ 134.5 ಮಿ.ಮೀ, ನಾಯಂಡಹಳ್ಳಿ 115 ಮಿ.ಮೀ, ವಿದ್ಯಾಪೀಠ 110 ಮಿ.ಮೀ, ಆರ್‌ಆರ್ ನಗರ ಕೆಂಗೇರಿ 80.5ಮಿ.ಮೀ, ಹಂಪಿನಗರ 80.5 ಮಿ.ಮೀ, ರಾಜರಾಜೇಶ್ವರಿ ನಗರ 02 77 ಮಿ.ಮೀ, ಎಚ್ ಗೊಲ್ಲಹಳ್ಳಿ 70.5 ಮಿ.ಮೀ, ದೊರೆಸಾನಿಪಾಳ್ಯ 70.5 ಮಿ.ಮೀ, ಬಿಳೆಕಹಳ್ಳಿ 70 ಮಿ.ಮೀ, ಹೆಮ್ಮಿಗೆಪುರ 62.5 ಮಿ.ಮೀ, ಹೆಮ್ಮಿಗೆಪುರ-2 61 ಮಿ.ಮೀ, ಹೆರೋಹಳ್ಳಿ 61 ಮಿ.ಮೀ, ಅರಕೆರೆ 46.5 ಮಿ.ಮೀ, ಪಟ್ಟಾಭಿರಾಮನಗರ 44 ಮಿ.ಮೀ, ಬಸವೇಶ್ವರ ನಗರ 43ಮಿ.ಮೀ, ಕೋರಮಂಗಲ 33 ಮಿ.ಮೀ, ನಾಗಪುರ 27 ಮಿ.ಮೀ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾನುವಾರದಿಂದೀಚೆಗೆ ಭಾರಿ ಮಳೆ ಸುರಿಯುತ್ತಿದ್ದು, ಅನೇಕ ಅವಾಂತರಗಳು ಸಂಭವಿಸಿವೆ. ಮಳೆ ಸಂಬಂಧಿತ ಅವಘಡಗಳಲ್ಲಿ ರಾಜ್ಯದಾದ್ಯಂತ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೇ ಮೂರು ಸಾವುಗಳು ಸಂಭವಿಸಿವೆ. ಬಿಟಿಎಂ ಲೇಔಟ್ನ 2ನೇ ಹಂತದ ಎನ್ಎಸ್ ಪಾಳ್ಯದ ಮಧುವನ ಅಪಾರ್ಟ್ಮೆಂಟ್ ಬೇಸ್ಮೆಂಟ್ ಮಳೆಯಿಂದ ಜಲಾವೃತವಾಗಿತ್ತು. ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಕರೆಂಟ್ ಶಾಕ್ ತಗುಲಿ ಅಪಾರ್ಟ್ಮೆಂಟ್ ನಿವಾಸಿ ಮನೋಹರ ಕಾಮತ್ ಮತ್ತು ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ಮೃತಪಟ್ಟಿದ್ದಾರೆ.
ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಜಯನಗರ, ಚಾಮರಾಜಪೇಟೆ, ಬನಶಂಕರಿ, ಶಾಂತಿನಗರ, ವಿಜಯನಗರ, ಚಂದ್ರಾ ಲೇಔಟ್, ರಾಜಾಜಿನಗರ, ಆರ್.ಟಿ.ನಗರ, ಹೆಬ್ಬಾಳ, ಮಲ್ಲೇಶ್ವರಂ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬಿಟಿಎಂ ಲೇಔಟ್ ಸೇರಿ ಹಲವೆಡೆ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಪೈಕಿ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಮಳೆ ಜೋರಾಗಿದೆ. ಪರಿಣಾಮವಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. 50ಕ್ಕೂ ಹೆಚ್ಚು ಬಡಾವಣೆಗಳು ಜಲಾವೃತಗೊಂಡು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆ ಶಿರೂರಿನಲ್ಲಿ ಸಂಭವಿಸಿದ್ದ ಭೀಕರ ಭೂ ಕುಸಿತ ದುರಂತದಲ್ಲಿ ಬದುಕುಳಿದಿದ್ದ ಅಂಕೋಲ ತಾಲೂಕಿನ ಉಳವರೆಯ ತಮ್ಮಣ್ಣಿ ಗೌಡ ಎಂಬವರು ಸೋಮವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಗುಡ್ಡ ಕುಸಿತದಲ್ಲಿ ಉಳವರೆಯ ತಮ್ಮಣ್ಣಿ ಗೌಡರ ಮನೆಯೂ ಧ್ವಂಸವಾಗಿತ್ತು. ಅಂದು ಮನೆಯಿಂದ ಹೊರಗೆ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದರು.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.