ಮಂಗಳೂರು : ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ ಮಾಡಿದೆ. ಕೊಲೆಯ ಹಿಂದೆ ಕಾಣದ ಕೈಗಳ ಕುತಂತ್ರ ಇದೆ. 50 ಲಕ್ಷ ರೂಪಾಯಿಗೂ ಹೆಚ್ಚು ಫಂಡ್ ಮಾಡಲಾಗಿದೆ. ಬಜ್ಪೆ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್ ಕೂಡ ಕೃತ್ಯದಲ್ಲಿ ಪರೋಕ್ಷವಾಗಿ ಕೈಜೋಡಿಸಿದ ಅನುಮಾನವಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಕೆಟಿ ಉಲ್ಲಾಸ್ ಆರೋಪ ಮಾಡಿದ್ದಾರೆ.
ಸುಹಾಸ್ ಕೊಲೆ ಸಂಬಂಧ ಬಂಧನವಾಗಿರುವ ಆರೋಪಿಗಳು ನೈಜ ಆರೋಪಿಗಳು ಹೌದೇ ಎಂಬ ಬಗ್ಗೆ ಸುಹಾಸ್ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಸಂಬಂಧ ನಮಗೂ ಒಂದಿಷ್ಟು ಅನುಮಾನಗಳಿವೆ. ಈ ಹತ್ಯೆ ಫಾಜಿಲ್ ಕೊಲೆಗೆ ಪ್ರತೀಕಾರ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ, ಈ ಪ್ರಕರಣದ ಹಿಂದೆ ಕೇವಲ ಫಾಜಿಲ್ ತಮ್ಮ ಮಾತ್ರ ಇಲ್ಲ. ದೊಡ್ಡ ಶಕ್ತಿಯೊಂದು ಇದಕ್ಕೆ 50 ಲಕ್ಷ ರೂಪಾಯಿಗೂ ಹೆಚ್ಚು ಫಂಡ್ ಮಾಡಿರುವ ಅನುಮಾನ ಇದೆ. ನಿಷೇಧಿತ ಪಿಎಫ್ಐ ಸಂಘಟನೆ ಮೇಲೆ ಅನುಮಾನ ಇದೆ. ಈ ಹಿಂದೆ ಮಾಡುತ್ತಿದ್ದ ಟಾರ್ಗೆಟ್ ಕಿಲ್ಲಿಂಗ್ ಈ ಕೇಸ್ನಲ್ಲೂ ಗೋಚರಿಸುತ್ತಿದೆ ಎಂದು ಕೆಟಿ ಉಲ್ಲಾಸ್ ಹೇಳಿದ್ದಾರೆ.