ಭೋಪಾಲ್: ಮಧ್ಯಪ್ರದೇಶದಲ್ಲಿ ಹಿಂದೂ ಮಕ್ಕಳನ್ನು ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. 27 ಮದರಸಾಗಳಲ್ಲಿ 556 ಹಿಂದೂ ಮಕ್ಕಳ ಬಲವಂತದ ಧಾರ್ಮಿಕ ಮತಾಂತರ ಮಾಡಲಾಗಿದೆಯೆಂದು ದೂರು ನೀಡಲಾಗಿದೆ.
ಪ್ರಕರಣ ಸಂಬಂಧ ಮಧ್ಯಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗ (NHRC) ನೋಟಿಸ್ ನೀಡಿ 15 ದಿನಗಳಲ್ಲಿ ಈ ಕುರಿತು ವಿವರವಾದ ಮಾಹಿತಿ ನೀಡುವಂತೆ ಸೂಚಿಸಿದೆ. ರಾಜ್ಯದ ಹಲವಾರು ಮದರಸಾಗಳು ಮುಸ್ಲಿಮೇತರ ಮಕ್ಕಳನ್ನು ಕುರಾನ್ ಅಧ್ಯಯನ ಮಾಡಲು ಒತ್ತಾಯಿಸುತ್ತಿವೆ. ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳಲು ಒತ್ತಡ ಹೇರುತ್ತಿವೆ ಎಂದು ದೂರಲಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತನಿಖೆ ನಡೆಸುವಂತೆ ನಿರ್ದೇಶಿಸಿದೆ. ಸೆ.26ರಂದು ಈ ಬಗ್ಗೆ NHRCಗೆ ದೂರು ಬಂದಿತ್ತು.ಸರ್ಕಾರದ ಅನುಮೋದನೆಯಿಲ್ಲದೆ ಕಾರ್ಯನಿರ್ವಹಿಸುವ ಮದರಸಾಗಳಲ್ಲಿ ಮುಸ್ಲಿಮೇತರ ಮಕ್ಕಳ ಪ್ರವೇಶದ ಬಗ್ಗೆ NHRC ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಭೋಪಾಲ್, ಹೋಶಂಗಾಬಾದ್, ಜಬಲ್ಪುರ್, ಝಬುವಾ, ಧಾರ್, ಬರ್ವಾನಿ, ಖಾಂಡ್ವಾ, ಖಾರ್ಗೋನ್ ಮತ್ತು ಪರಾಸಿಯಾ ಸೇರಿದಂತೆ ಜಿಲ್ಲೆಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಬಾಲ ನ್ಯಾಯ ಕಾಯ್ದೆ, 2015 ಮತ್ತು ಸಂವಿಧಾನದ 28(3) ನೇ ವಿಧಿಯ ಪ್ರಕಾರ ಅನುಮೋದನೆಯಿಲ್ಲದೆ ಧಾರ್ಮಿಕ ಶಿಕ್ಷಣವನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಂತಹ ಮಕ್ಕಳನ್ನು ಈ ಸಂಸ್ಥೆಗಳಿಂದ ತಕ್ಷಣ ಬಿಡುಗಡೆಗೊಳಿಸುವಂತೆ ಮತ್ತು ಅನುಮೋದಿಸದ ಮದರಸಾಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.