ದಾವಣಗೆರೆ: ದಾವಣಗೆರೆಯಲ್ಲಿ ಐಟಿ, ಬಿಟಿ ಕಂಪನಿಗಳನ್ನು ಆಹ್ವಾನಿಸುವ ಮೂಲಕ ಸ್ಥಳೀಯವಾಗಿ ಜಿಲ್ಲೆಯ ಯುವ ಜನರಿಗೆ ಉದ್ಯೋಗ ದೊರಕಿಸಿಕೊಡಲು ದೇಶ, ವಿದೇಶದ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾದ ಫಲವಾಗಿ ಮುಂದಿನ 60 ದಿನಗಳಲ್ಲಿ 10 ಕ್ಕೂ ಹೆಚ್ಚು ಕಂಪನಿಗಳು ಆಗಮಿಸುವ ನಿರೀಕ್ಷೆ ಮಾಡಲಾಗಿದೆ ಎಂದು ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಬುಧವಾರ ಜಿಲ್ಲಾಡಳಿತ ಭವನದ ಸ್ಮಾರ್ಟ್‍ಸಿಟಿ ಕಚೇರಿಯಲ್ಲಿ ವಿವಿಧ ಐಟಿ, ಬಿಟಿ ಕಂಪನಿಗಳ ಸಿಇಓ, ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಟೆಕ್‍ರೈಸ್ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಐಟಿ, ಬಿಟಿ ಕಂಪನಿಗಳಿಗೆ ಬೇಕಾದ ಮೂಲಭೂತ ಸೌಕರ್ಯ ಸೇರಿದಂತೆ ಸ್ಥಳಾವಕಾಶವನ್ನು ಒದಗಿಸಿಕೊಡಲಾಗುತ್ತದೆ. ತಾತ್ಕಾಲಿಕವಾಗಿ ಈಗಿರುವ ನೂತನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೊದಲ, ಎರಡನೇ, ಮೂರನೇ ಮಹಡಿಯಲ್ಲಿ ಕಂಪನಿಗಳಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. ಈಗಾಗಲೇ ಇಲ್ಲಿ ಅತ್ಯಾಧುನಿಕವಾಗಿ ಸೌಲಭ್ಯಗಳಿದ್ದು ಐಟಿ ಕಂಪನಿಗಳಿಗೆ ಅಗತ್ಯವಿರುವ ವ್ಯವಸ್ಥೆಗಳು ಇಲ್ಲಿವೆ. ಹೋಗಿ ಬರಲು ಬಸ್ ಸೌಕರ್ಯ ಸೇರಿದಂತೆ ದಾವಣಗೆರೆಯಲ್ಲಿ ಸ್ಟಾರ್ ಹೋಟೆಲ್‍ಗಳಿಂದ ಮೆಡಿಕಲ್ ಕಾಲೇಜು, ವೈದ್ಯಕೀಯ ಸೌಕರ್ಯ ಸೇರಿದಂತೆ ಕಾನೂನು ಸುವ್ಯವಸ್ಥೆ, ಶಾಂತತೆ, ಸ್ವಚ್ಚತೆ ಇಲ್ಲಿದೆ ಎಂದರು.
ಐಟಿ, ಬಿಟಿ ಕಂಪನಿಗಳನ್ನು ಸ್ಥಾಪನೆ ಮಾಡಲು ಕೇಂದ್ರದ ಎಸ್‍ಟಿಪಿಐ, ಕರ್ನಾಟಕ ಡಿಜಿಟೆಲ್ ಎಕನಾಮಿ ಮಿಷನ್ ಸಹಕಾರದಲ್ಲಿ ಜಿಲ್ಲಾಡಳಿತ ನೆರವಿನಿಂದ ಜೂನ್‍ನಲ್ಲಿ ದಾವಣಗೆರೆ ವಿಷನ್ ಗ್ರೂಪ್ ರಚಿಸಲಾಗಿದೆ. ಬೆಂಗಳೂರಿನ ಪ್ರತಿಷ್ಟಿತ ಕಂಪನಿಗಳು ಸೇರಿದಂತೆ ವಿವಿಧ ರಾಜ್ಯಗಳಿಗೆ ಈ ತಂಡವು ಭೇಟಿ ಮಾಡಿ ಅಧ್ಯಯನ ಮಾಡಿ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಕಂಪನಿಗಳ ಸಿಇಓಗಳ ಸಭೆ ಮಾಡುವ ಸ್ಥಾಪಿಸುವ ಹಂತಕ್ಕೆ ತಲುಪಿದ್ದು ಮುಂದಿನ 60 ದಿನಗಳಲ್ಲಿ ಕಂಪನಿಗಳನ್ನು ಸ್ಥಾಪಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು.
ದಾವಣಗೆರೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಿಇಓಗಳಾಗಿದ್ದು ಅವರ ಮೂಲಕವೂ ಕಂಪನಿಗಳನ್ನು ಇಲ್ಲಿಗೆ ಆಕರ್ಷಿಸಲು ಪ್ರಯತ್ನಿಸಲಾಗುತ್ತದೆ. ಜಿಲ್ಲೆಯಲ್ಲಿ ವೃತ್ತಿ ಶಿಕ್ಷಣ ಸೇರಿದಂತೆ ಡಿಪ್ಲೊಮಾ, ಮಾನವಿಕ ವಿಜ್ಞಾನಗಳು ಸೇರಿ ಪ್ರತಿ ವರ್ಷ 10 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೋರ್ಸ್‍ಗಳಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಸ್ಥಳೀಯವಾಗಿ ವಿವಿಧ ಕಂಪನಿಗಳನ್ನು ಸ್ಥಾಪನೆ ಮಾಡುವುದರಿಂದ ಉದ್ಯೋಗಾವಕಾಶಗಳು ದೊರೆಯಲಿದೆ. ಪ್ರತಿಷ್ಟಿತ ಕಂಪನಿಗಳು ಇಲ್ಲಿ ಬಂದು ಕೆಲಸ ಮಾಡಲು ಬೇಕಾದ ಎಲ್ಲಾ ನೆರವು ನೀಡಲಾಗುತ್ತದೆ. ಜೊತೆಗೆ ಈಗಾಗಲೇ ದಾವಣಗೆರೆ ರಾಜ್ಯ ಮತ್ತು ದೇಶದಲ್ಲಿ ಸ್ವಚ್ಚ ನಗರವಾಗಿ ಹೊರಹೊಮ್ಮಿದೆ ಎಂದರು.
ದಾವಣಗೆರೆಯಲ್ಲಿ ಸ್ಟಾಟಪ್ ಕಂಪನಿಗಳನ್ನು ಸ್ಥಾಪಿಸುವವರಿಗೆ ಮೂಲಭೂತ ಸೌಕರ್ಯದ ಜೊತೆಗೆ ಆರ್ಥಿಕವಾಗಿ ಬ್ಯಾಂಕ್‍ಗಳಿಂದ ಸಾಲ, ಸೌಲಭ್ಯಗಳು ಅಗತ್ಯವಿದ್ದಲ್ಲಿ ಬ್ಯಾಂಕ್‍ಗಳ ಮೂಲಕ ಸಾಲ ಒದಗಿಸಲು ಬ್ಯಾಂಕರ್ಸ್‍ಗಳೊಂದಿಗೂ ಸಭೆ ನಡೆಸಲಾಗಿದೆ ಎಂದರು.
ಕರ್ನಾಟಕ ಡಿಜಿಟಲ್ ಎಕಾಮಿ ಮಿಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಗುಪ್ತಾ ಮಾತನಾಡಿ ಐಟಿ, ಬಿಟಿ ಕಂಪನಿಗಳನ್ನು ಬೆಂಗಳೂರಿನಿಂದ ಹೊರಗಡೆ ಸ್ಥಾಪಿಸಬೇಕೆಂದು ಕಲಬುರಗಿ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಜಾಗತಿಕ ಆರ್ಥಿಕ ವಲಯಗಳನ್ನಾಗಿ ಗುರುತಿಸಲಾಗಿದ್ದು ದಾವಣಗೆರೆಯು ಸೇರಲಿದೆ. ಇಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ ಈಗಾಗಲೇ ನಿರ್ಮಿಸಲಾಗಿದೆ. ಇಲ್ಲಿ ಜಾಗತಿಕ ಆರ್ಥಿಕ ವಲಯಗಳನ್ನು ಸ್ಥಾಪನೆ ಮಾಡುವುದರಿಂದ ಹಲವು ಕಂಪನಿಗಳು ಇಲ್ಲಿಗೆ ಬರಲಿವೆ. ಹಲವು ಕಂಪನಿಗಳ ಜೊತೆಗೆ ಸಭೆ ನಡೆಸಲಾಗಿದ್ದು 10 ಕ್ಕಿಂತ ಹೆಚ್ಚು ಕಂಪನಿಗಳು ಆಸಕ್ತಿ ತೋರಿದ್ದು ಶೀಘ್ರವಾಗಿ 3 ಕಂಪನಿಗಳು ಕಾರ್ಯಾರಂಭ ಮಾಡಲು ಉತ್ಸುಕವಾಗಿವೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ದಾವಣಗೆರೆಯಲ್ಲಿ ಐಟಿ, ಬಿಟಿ ಕಂಪನಿಗಳನ್ನು ಸ್ಥಾಪಿಸಲು ವಿಪುಲ ಅವಕಾಶಗಳಿರುವುದರಿಂದ ಕಳೆದ ಜೂನ್ ತಿಂಗಳಲ್ಲಿ ವಿಷನ್ ದಾವಣಗೆರೆ ತಂಡವನ್ನು ರಚಿಸಲಾಗಿದೆ. ಈ ತಂಡದಿಂದ ಈಗಾಗಲೇ ವಿವಿಧ ಅಧ್ಯಯನ ಕೈಗೊಂಡು ವಿವಿಧ ಇಲಾಖೆಗಳ ಸಂಪರ್ಕ ಮತ್ತು ಕಂಪನಿಗಳನ್ನು ಸಂಪರ್ಕಿಸಿ ಸಾಕಷ್ಟು ಬೆಳೆವಣಿಗೆ ಕಾಣಲಾಗಿದೆ. ಇಂದು 20 ಕ್ಕೂ ಹೆಚ್ಚು ಕಂಪನಿಗಳ ಸಿಇಓಗಳ ಜೊತೆಗೆ ಸಭೆಯನ್ನು ಮಾಡಿ ಚರ್ಚಿಸಲಾಗಿದೆ. ಇಲ್ಲಿ ಸ್ಥಾಪನೆ ಮಾಡುವ ಕಂಪನಿಗಳಿಗೆ ಬೇಕಾದ ಎಲ್ಲಾ ನೆರವು ನೀಡಲು ಜಿಲ್ಲಾಡಳಿತ ಬದ್ದವಾಗಿದೆ. ನವೆಂಬರ್ 16 ರಿಂದ ಟೆಕ್ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದ್ದು ಜಿಲ್ಲೆಯಿಂದ ಸ್ಟಾಲ್ ಹಾಕಿ ಪ್ರತಿನಿಧಿಸಲಾಗುತ್ತದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ವಿವಿಧ ಕಂಪನಿಗಳ ಸಿಇಓ, ಪ್ರಾಂಶುಪಾಲರು ಉಪಸ್ಥಿತರಿದ್ದರು.


































