ಧರ್ಮಶಾಲಾ :ನಾವು ದೇಶದ ಏಕತೆಯನ್ನು ಕಾಪಾಡಬೇಕು. ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು ಎಂದು ನಟಿ, ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾಷಾ ಚರ್ಚೆಯ ಮಧ್ಯೆ ಬಿಜೆಪಿ ಸಂಸದೆ ಈ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಕಾರ್ಯಕರ್ತರು ಮರಾಠಿ ಮಾತನಾಡದ ಕಾರಣ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆಯೂ ಮಾತನಾಡಿದ್ದಾರೆ.
ನಮ್ಮ ದೇಶವನ್ನು ವಿಭಜಿಸುವವರಿಂದ ನಾವು ದೂರವಿರಬೇಕು. ನಮ್ಮ ದೇಶದ ಜನರು ವಿಭಿನ್ನ ರೀತಿಯಲ್ಲಿ ಪರಸ್ಪರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಾರೆ. ಇಂತಹ ಕ್ರಮಗಳು ಅವರ ಪ್ರಯತ್ನಗಳಿಗೆ ಅಡ್ಡಿಪಡಿಸುತ್ತವೆ. ಪ್ರವಾಸೋದ್ಯಮಕ್ಕಾಗಿ ಇಲ್ಲಿಗೆ ಅನೇಕ ಜನರು ಬರುತ್ತಾರೆ. ಅವರು ಪಹಾರಿಗಳು ಹೇಗೆ ಮಾತನಾಡುತ್ತಾರೆಂದು ತಿಳಿಯಲು ಬಯಸುತ್ತಾರೆ. ನಾವು ಪ್ರಯಾಣಿಸುವಾಗ, ದಕ್ಷಿಣದ ಜನರು ಹೇಗೆ ಮಾತನಾಡುತ್ತಾರೆಂದು ತಿಳಿಯಲು ನಾವು ಬಯಸುತ್ತೇವೆ. ದೇಶದಲ್ಲಿ ಏಕತೆಯ ಮನೋಭಾವವನ್ನು ನಾವು ಕಾಪಾಡಿಕೊಳ್ಳಬೇಕು. ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹಿಂದಿ-ಮರಾಠಿ ಭಾಷಾ ಸಂಘರ್ಷ ಜೋರಾಗಿದೆ. ಮಹಾರಾಷ್ಟ್ರ ಸರ್ಕಾರವು ತ್ರಿಭಾಷಾ ನೀತಿ ಜಾರಿಗೆ ಮುಂದಾಗಿತ್ತು. ಶಾಲೆಗಳಲ್ಲಿ ಹಿಂದಿಯನ್ನೂ ಕಡ್ಡಾಯಗೊಳಿಸಲು ಕ್ರಮಕೈಗೊಂಡಿತ್ತು. ಆದರೆ, ಮರಾಠಿಗರು, ವಿಪಕ್ಷಗಳು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.