ನವದೆಹಲಿ : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆನೆಗಳ ಹಾವಳಿ ವ್ಯಾಪಕವಾಗಿದ್ದು, ಬ್ಯಾರಿಕೇಡ್ ಅಳವಡಿಕೆಗೆ ಕಾಂಪಾ ನಿಧಿಯಿಂದ ವಿಶೇಷ ಅನುದಾನ ನೀಡಬೇಕು ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ ಮನವಿ ಮಾಡಿಕೊಂಡರು.
ಬನ್ನೇರುಘಟ್ಟ, ಸಾತನೂರು ಮತ್ತಿತರ ಕಡೆಗಳಲ್ಲಿ ಆನೆ ದಾಳಿಗಳಿಂದ ಮನುಷ್ಯರು ಮೃತಪಟ್ಟಿದ್ದಾರೆ. ಕೃಷಿಗೆ ಅಪಾರವಾದ ನಷ್ಟವಾಗಿದೆ. ಇದರಿಂದ ಬ್ಯಾರಿಕೇಡ್ ಅಳವಡಿಕೆಗೆ ಕಾಂಪಾ ನಿಧಿಯಿಂದ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಕಾಡು ಪ್ರಾಣಿಗಳ ದಾಳಿಯಿಂದ ಅರಣ್ಯ ಇಲಾಖೆಯವರು ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ರೈತರಿಗೆ 15 ಲಕ್ಷ ರೂ.ಯಷ್ಟೇ ಪರಿಹಾರ ಒದಗಿಸಲಾಗುತ್ತದೆ. ಈ ತಾರತಮ್ಯ ಸರಿಯಲ್ಲ. ಪರಿಹಾರವನ್ನು 25 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಭರವಸೆ ನೀಡಿದರು.
				
															
                    
                    
                    
                    
                    
































