ಬೆಂಗಳೂರು : ಬೆಂಗಳೂರಿನಲ್ಲಿ ನಡೆಯುತ್ತಿರುವ “ಏರೋ ಇಂಡಿಯಾ 2025′ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದೇಶೀಯವಾಗಿ ನಿರ್ಮಿತ ಎಚ್ಟಿಟಿ-40 ಬೇಸಿಕ್ ತರಬೇತಿ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ 8:00 ಗಂಟೆಗೆ ಏರೋ ಇಂಡಿಯಾ 2025ಕ್ಕೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ, ಭಾರತದ ಸ್ಥಳೀಯ ಮೂಲ ತರಬೇತಿ ವಿಮಾನವಾದ ಎಚ್ಟಿಟಿ 40ರಲ್ಲಿ ಹಾರಾಟ ನಡೆಸಿದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿರುವ ಈ ತರಬೇತಿ ವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಬಳಿಕ ಮಾಧ್ಯಮ ಮಿತ್ರರಿಗೆ ತಮ್ಮ ಅನುಭವ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ‘ಇಂದು ಎಚ್ಎಎಲ್ ನಿರ್ಮಿಸಿರುವ ಎಚ್ಟಿಟಿ-40 ವಿಮಾನದಲ್ಲಿ ಹಾರಾಡಲು ಅವಕಾಶ ಸಿಕ್ಕಿದೆ. ಎಚ್ಎಎಲ್ ಭಾರತದ ಹೆಮ್ಮೆ. ನಮ್ಮ ಬೆಂಗಳೂರಿನ ಹೆಮ್ಮೆ’ ಎಂದು ಹೇಳಿದ್ದಾರೆ. 2012ರಲ್ಲಿ ಯುಪಿಎ ಸರ್ಕಾರದ ಯೋಜನೆಯಿಂದಾಗಿ ದೇಶೀಯ ವಿಮಾನ ತಯಾರಿಕಾ ಯೋಜನೆ ಭಾರಿ ಹಿನ್ನಡೆ ಅನುಭವಿಸಿತ್ತು. ಆದರೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಚ್ಎಎಲ್ಗೆ ಉತ್ತೇಜನ ಲಭಿಸಿದೆ’ ಎಂದು ಅವರು ಹೇಳಿದ್ದಾರೆ.
