ಚಿತ್ರದುರ್ಗ : ಕುರ್ಚಿ ಸಂರಕ್ಷಣೆ, ಸ್ವಂತ ಲಾಭಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಕಾಂಗ್ರೆಸ್ ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ಬಿಜೆಪಿ. ಅಧಿಕಾರಕ್ಕೆ ಬಂದಿದೆಯೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಪ ಪ್ರಚಾರದಲ್ಲಿ ತೊಡಗಿದೆ ಎಂದು ಮೈಸೂರು ಮಹಾರಾಜರ ಕುಡಿ ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ವಾಗ್ದಾಳಿ ನಡೆಸಿದರು.
sಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಚಿತ್ರದುರ್ಗ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಕಾಂಗ್ರೆಸ್ ಅಪ ಪ್ರಚಾರದ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿತು. ಡಾ.ಬಿ.ಆರ್.ಅಂಬೇಡ್ಕರ್ ಪವಿತ್ರ ಗ್ರಂಥ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅನೇಕ ಜಾತಿ, ಧರ್ಮ, ಆಚಾರ, ವಿಚಾರ, ವೈವಿದ್ಯತೆಯಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ರಕ್ಷಣೆ ನೀಡಿದೆ. 1951 ರಲ್ಲಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿಗೊಳಿಸಿದರು. 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ ಇಂದಿರಾಗಾಂಧಿ ಸಂವಿಧಾನ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ದವಾಗಿ ನಡೆದುಕೊಂಡರು. ಆರ್ಟಿಕಲ್ 368 ರ ಪ್ರಕಾರ ಸಂವಿಧಾನ ತಿದ್ದುಪಡಿಗೆ ಅವಕಾಶವಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ತಿದ್ದುಪಡಿ ಮಾಡಿದೆ. ಎಲ್ಲಾ ಸಂದರ್ಭಗಳಲ್ಲಿಯೂ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡು ಬರುತ್ತಿರುವುದು ಕಾಂಗ್ರೆಸ್ ಎನ್ನುವುದು ಜನರಿಗೆ ಗೊತ್ತಿರಲಿ ಎಂದು ಯದುವೀರ ಕೃಷ್ಣದತ್ತ ಒಡೆಯರ್ ಜಾಗೃತಿಗೊಳಿಸಿದರು.
ಅಟಲ್ ಬಿಹಾರಿ ವಾಜಪೇಯಿ, ಈಗಿನ ಪ್ರಧಾನಿ ನರೇಂದ್ರಮೋದಿ ಇವರುಗಳು ಸಂವಿಧಾನ ತಿದ್ದುಪಡಿ ಮಾಡಿರುವುದು ಪ್ರಜೆಗಳ ಒಳಿತಿಗಾಗಿಯೇ ವಿನಃ ಅಧಿಕಾರ ಉಳಿಸಿಕೊಳ್ಳಲಿಕ್ಕಲ್ಲ. ಸಂವಿಧಾನದ ಮಾಹಿತಿ ಕೊಡುತ್ತಿದ್ದೇವೆ. ಆದರೆ ತೀರ್ಮಾನ ನಿಮ್ಮ ಕೈಯಲ್ಲಿದೆ. ಸಂವಿಧಾನ ಸಂಪೂರ್ಣ ಮೈಸೂರಿನ ಆಸ್ತಿ. 1918 ರಲ್ಲಿ ಮೈಸೂರು ಮಹಾರಾಜರು ಮೊದಲು ಮೀಸಲಾತಿ ಕುರಿತು ಚರ್ಚಿಸಿ ಮಿಲ್ಲರ್ ಆಯೋಗ ರಚಿಸಿದ ನಂತರ ಬಂದ ವರದಿಯ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆ. ಅಂದಿನಿಂದ ಇಲ್ಲಿಯತನಕ ಸಂವಿಧಾನದ ರಕ್ಷಿಸುವ ಕೆಲಸವಾಗುತ್ತಿದೆ. ವಿಶ್ವದಲ್ಲಿಯೇ ಭಾರತ ಮೂರನೆ ಸ್ಥಾನಕ್ಕೆ ಹೋಗುತ್ತದೆ. ಪ್ರಧಾನಿ ನರೇಂದ್ರಮೋದಿರವರ ವಿಕಸಿತ ಭಾರತದ ಕನಸಿಗೆ ಪ್ರತಿಯೊಬ್ಬರು ಕೈಜೋಡಿಸುವಂತೆ ಯದುವೀರ ಕೃಷ್ಣದತ್ತ ಒಡೆಯರ್ ಮನವಿ ಮಾಡಿದರು.
ಹಿರಿಯೂರಿನ ವಾಣಿವಿಲಾಸಸಾಗರ, ಚಳ್ಳಕೆರೆ ಸಮೀಪದ ರಾಣಿಕೆರೆಗೆ ಬಾಗಿನಿ ಅರ್ಪಿಸಿ ಬಂದಿರುವುದು ನನಗೆ ಖುಷಿಯಾಗಿದೆ. ಪ್ರತಿ ವರ್ಷವೂ ಮಳೆ-ಬೆಳೆ ಸಮೃದ್ದಿಯಾಗಿ ಸಕಲ ಜೀವರಾಶಿಗಳು ನೆಮ್ಮದಿಯಾಗಿರಲಿ. ಚಿತ್ರದುರ್ಗ ಜಿಲ್ಲೆಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ ಎನ್ನುವುದನ್ನು ಸ್ಮರಿಸಿದರು.
ವಾಗ್ಮಿ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಡಾ.ಬಾಬಾ ಸಾಹೇಬರೆ ಬಂದರೂ ಸಂವಿಧಾನ ತಿದ್ದುಪಡಿಯಾಗುವುದು ಅಸಾಧ್ಯವೆಂದು ದೇಶದ ಪ್ರಧಾನಿ ನರೇಂದ್ರಮೋದಿ ಹೇಳುವ ಮೂಲಕ ಕಾಂಗ್ರೆಸ್ ಅಪ ಪ್ರಚಾರಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. 106 ಬಾರಿ ಸಂವಿಧಾನ ತಿದ್ದುಪಡಿಯಾಗಿದ್ದು, ಕಾಂಗ್ರೆಸ್ 75 ಬಾರಿ ತಿದ್ದುಪಡಿ ಮಾಡಿದೆ. ಬಿಜೆಪಿ.ಸಂವಿಧಾನ ಬದಲಾಯಿಸುವುದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದೆಂದು ಹೇಳಿಕೊಂಡು ಸುತ್ತುತ್ತಿರುವ ಕಾಂಗ್ರೆಸ್ನಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಾಕಷ್ಟು ಅವಮಾನ ಅನುಭವಿಸಿದ್ದಾರೆ. ಸಂವಿಧಾನ ರಚನೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಮರ್ಥರು ಎಂದು ಮಹಾತ್ಮಗಾಂಧಿ ಹೇಳಿದ್ದರು ಎನ್ನುವುದನ್ನು ನೆನಪಿಸಿದರು.
ಪ್ರಧಾನಿ ನರೇಂದ್ರಮೋದಿ ಸಂವಿಧಾನವನ್ನು 8 ಬಾರಿ ತಿದ್ದುಪಡಿಗೊಳಪಡಿಸಿದ್ದಾರೆ. ಇದಕ್ಕೆ ನಾಲ್ಕು ಪಟ್ಟು ಹೆಚ್ಚು ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿದೆ. ಸಂವಿಧಾನದ ಆಶಯದ ಮೇಲೆ ಕೈ ಹಾಕಿದ ಕಾಂಗ್ರೆಸ್ ತುರ್ತು ಪರಿಸ್ಥಿತಿ ಮೂಲಕ ಸಂವಿಧಾನವನ್ನು ಕೊಂದಿದೆ. ಬಿಜೆಪಿ. ಮೇಲೆ ಅಪ ಪ್ರಚಾರ ಮಾಡುವ ನೈತಿಕತೆ ಕಾಂಗ್ರೆಸ್ಗಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಎಚ್ಚರಿಸಿದರು.
ಸಂವಿಧಾನ ಸನ್ಮಾನ ಮತ್ತು ಪುಸ್ತಕದ ಲೇಖಕ ವಿಕಾಸ್ ಕುಮಾರ್ ಪಿ. ಮಾತನಾಡಿ ಸಂವಿಧಾನವನ್ನು 75 ಸಾರಿ ತಿದ್ದುಪಡಿ ಮಾಡಿರುವ ಕಾಂಗ್ರೆಸ್ ಹಿಂದಿನಿಂದಲೂ ಡಾ.ಬಿ.ಆರ್.ಅಂಬೇಡ್ಕರ್ರವರನ್ನು ಅವಮಾನಿಸಿಕೊಂಡು ಬರುತ್ತಿದೆ. ಚುನಾವಣೆಯಲ್ಲಿ ಅಂಬೇಡ್ಕರ್ರನ್ನು ಸೋಲಿಸಿದ್ದು, ಕಾಂಗ್ರೆಸ್. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲು ಅಂಬೇಡ್ಕರ್ಗೆ ಅವಕಾಶ ನೀಡಲಿಲ್ಲ. ಅಂಬೇಡ್ಕರ್ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಗೆ ಬಿಜೆಪಿ. ಬಗ್ಗೆ ಅಪ ಪ್ರಚಾರ ಮಾಡುವ ನೈತಿಕತೆಯಿಲ್ಲ. ಸಂವಿಧಾನ 106 ಬಾರಿ ತಿದ್ದುಪಡಿಯಾಗಿರುವುದರಲ್ಲಿ ಕಾಂಗ್ರೆಸ್ 75 ಬಾರಿ ತಿದ್ದುಪಡಿ ಮಾಡಿ ಸಂವಿಧಾನಕ್ಕೆ ಅಪಚಾರವೆಸಗಿದೆ ಎಂದು ಕಿಡಿ ಕಾರಿದರು. ಜಿ.ಹೆಚ್.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.