ಹಾಸನ : ಮುಡಾ ಪ್ರಕರಣ ಬಿಜೆಪಿಯ ಸೃಷ್ಟಿ ಅಷ್ಟೇ. ಸಿಎಂ ಆಗಿರೋರಿಗೆ ಮರ್ನಾಲ್ಕು ಸೈಟ್ ಯಾವ ಲೆಕ್ಕ ಹೇಳಿ. ಎಂದು ಮುಡಾ ಹಗರಣದಲ್ಲಿ ಸಿಎಂ ಪಾತ್ರ ವಿಚಾರವಾಗಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ದೂರು ಕೊಟ್ಟು ಹೇಳಿಕೆ ಕೊಡ್ತಿದ್ದಾರೋ ಅವರದ್ದೇ ಪಾತ್ರ ಇದ್ದಂತಿದೆ. ಇನ್ನು ಸ್ವಲ್ಪದಿನ, ಎಲ್ಲವೂ ಆಚೆ ಬರುತ್ತದೆ. ಯಾರದ್ದು ಎಷ್ಟು ಸೈಟು ಇದೆ, ಎಲ್ಲವೂ ಆಚೆ ಬರುತ್ತೆ. ಮುಡಾ ಇರಲಿ, ಬಿಡಿಎ ಇರಲಿ, ಎಲ್ಲೇ ಕಾನೂನು ಬಾಹಿರ ಚಟುವಟಿಕೆ ಆಗಿದ್ದರೂ ಶಿಕ್ಷೆಯಾಗಬೇಕು. ಸಾರ್ವಜನಿಕ ಆಸ್ತಿಯನ್ನು ಯಾರೇ ಲಪಟಾಯಿಸಿದ್ರೂ ಅದು ಮೋಸದ ಕೆಲಸ. ಹಾಗೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದರು.
ಲೋಕಾಯುಕ್ತ ವರದಿಯಲ್ಲಿ ಸಿಎಂ ಹಾಗೂ ಪತ್ನಿಗೆ ಕ್ಲೀನ್ಚಿಟ್ ವಿಚಾರವಾಗಿ ಮಾತನಾಡಿ, ಜ.25ರ ಒಳಗೆ ವರದಿ ನೀಡಬೇಕಿತ್ತು ಅನ್ನೋದು ಸರ್ಕಾರದ ನಿರ್ದೇಶನ ಅಲ್ಲ. ಅದು ಕೋರ್ಟ್ ನಿರ್ದೇಶನ, ಹಾಗಾಗಿ ವರದಿ ನೀಡಿದ್ದಾರೆ. ವರದಿ ಹೊರಗೆ ಬಂದ ನಂತರ ಪ್ರತಿಕ್ರಿಯೆ ನೀಡೋಣ ಎಂದು ಹೇಳಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಪ್ರತಿಕ್ರಿಯಿಸಿ, ಹೀಗೆ ಕಿರುಕುಳ ಕೊಡೋರಿಗೆ ಕಠಿಣ ಶಿಕ್ಷೆಯಾಗಬೇಕು. ಹಾಸನ ಜಿಲ್ಲೆಯಲ್ಲೂ ಈ ಸಮಸ್ಯೆ ಸಾಕಷ್ಟಿದೆ. ಕೆಲ ಸಂಸ್ಥೆಗಳು ಆರ್ಬಿಐ ಅನುಮತಿ ಪಡೆದು ಫೈನಾನ್ಸ್ ನಡೆಸುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ಕೊಟ್ಟಾಗ ನಾವು ಕ್ರಮ ಕೈಗೊಳ್ಳಬಹುದು. ಹಾಗಾಗಿ ಸಿಎಂ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇಂತಹ ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಬಗ್ಗೆಯೂ ಚರ್ಚೆ ಆಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಆಗಲಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದಕ್ಕಾಗಿ ನಿನ್ನೆ ರಜೆ ಇದ್ದರೂ ಸಿಎಂ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.