ಮೈಸೂರು: ಸೈಟ್ ಹಂಚಿಕೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳು, ಎರಡನೇ ದಿನವಾದ ಶನಿವಾರ ರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಎರಡು ಹಾರ್ಡ್ ಡಿಸ್ಕ್‌ನಲ್ಲಿ ದಾಖಲೆಗಳನ್ನು ಸಂಗ್ರಹಿಸಿ ಕೊಂಡೊಯ್ದಿರುವ ಅಧಿಕಾರಿಗಳು, ವೈಟ್ನರ್ ಹಾಕಿ ತಿದ್ದಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಪತ್ರದ ಮೂಲ ಪ್ರತಿಯನ್ನೂ ಮುಡಾದಿಂದ ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ನೋಟಿಸ್ ನೀಡಿದರೂ ಮುಡಾ ಅಧಿಕಾರಿಗಳು ವೈಟ್ನರ್ ಹಾಕಿ ತಿದ್ದಲಾಗಿರುವ ದಾಖಲೆಗಳ ಮೂಲ ಪ್ರತಿಯನ್ನು ಇ.ಡಿ.ಗೆ ನೀಡಲು ಹಿಂದೇಟು ಹಾಕಿದ್ದರು. ಶುಕ್ರವಾರ ಇಡೀ ದಿನದ ವಿಚಾರಣೆ ಬಳಿಕ ಕೊನೆಗೂ ಆ ದಾಖಲೆಗಳನ್ನು ಮುಡಾ ಅಧಿಕಾರಿಗಳು ನೀಡಿದ್ದಾರೆ. ಈ ವೇಳೆ ಆ ಮೂಲ ದಾಖಲೆಯ ಅಸಲಿಯತ್ತು ಪತ್ತೆಗಾಗಿ ಎಫ್ಎಸ್ಎಲ್ ಅಧಿಕಾರಿಯನ್ನೂ ಇ.ಡಿ. ಅಧಿಕಾರಿಗಳು ಕರೆಸಿಕೊಂಡು ಪರಿಶೀಲಿಸಿದ್ದಾರೆ. ಮುಡಾ ಮೇಲೆ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸಂಬಂಧಿಸಿದ ಪ್ರಕರಣವನ್ನೇ ಗುರಿಯಾಗಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
