ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಕುರಿತು ಇಂದು ಮಹತ್ವದ ತೀರ್ಪು ಹೊರ ಬೀಳಲಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ತೀರ್ಪನ್ನು ಇಂದು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಪ್ರಕಟಿಸಲಿದೆ. ಲೋಕಾಯುಕ್ತ ಪೊಲೀಸರು ಕಳೆದ ಫೆಬ್ರವರಿಯಲ್ಲಿ ಸಲ್ಲಿಸಿದ ಸುಮಾರು 8,000 ಪುಟಗಳ ಬೃಹತ್ ‘ಬಿ’ ರಿಪೋರ್ಟ್‌ನಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸೋದರಮಾವ ಮಲ್ಲಿಕಾರ್ಜುನಸ್ವಾಮಿ ಹಾಗೂ ಭೂಮಾಲೀಕ ದೇವರಾಜು ವಿರುದ್ಧ ಸಾಕ್ಷ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪ ಸಾಬೀತು ಪಡಿಸಲಾಗಿಲ್ಲ ಎಂದು ಉಲ್ಲೇಖಿಸಿತ್ತು.
ಆದರೆ ಈ ರಿಪೋರ್ಟ್‌ಗೆ ಜಾರಿ ನಿರ್ದೇಶನಾಲಯ (ED) ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ಬುಧವಾರ ನ್ಯಾಯಾಧೀಶರು ಇಡಿ ಮತ್ತು ಲೋಕಾಯುಕ್ತಾ ವಕೀಲರ ವಾದ ವಿವಾದ ಆಲಿಸಿ ಇಂದಿಗೆ ತೀರ್ಪುನ್ನ ಕಾಯ್ದಿರಿಸಿದ್ದರು. ಸಿಎಂ ಹಾಗೂ ಸಿಎಂ ಕುಟುಂಬಕ್ಕೆ ಲೋಕಾಯುಕ್ತರು ನೀಡಿರುವ ಕ್ಲೀನ್ ಚೀಟ್ ಪ್ರಶ್ನಿಸಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ದೂರುದಾರ ಸ್ನೇಹಮಹಿ ಕೃಷ್ಣ ಅರ್ಜಿ ಹಾಕಿದ್ದರು. ಇಡಿ ಕೂಡ ಲೋಕಾಯುಕ್ತ ವರದಿ ಪ್ರಶ್ನಿಸಿ ಅರ್ಜಿ ಹಾಕಿತ್ತು. ಎಲ್ಲರ ವಾದ ಆಲಿಸಿರುವ ನ್ಯಾಯಾಲಯ ಇವತ್ತು ಲೋಕಾಯುಕ್ತ ವರದಿ ಒಪ್ಪಿಕೊಳ್ಳಬೇಕಾ ಅಥವಾ ತಿರಸ್ಕರಿಸಬೇಕಾ ಎಂಬ ಆದೇಶ ನೀಡಲಿದೆ. ಒಂದು ವೇಳೆ ಲೋಕಾಯುಕ್ತಾ ವರದಿ ನ್ಯಾಯಾಲಯ ಎತ್ತಿ ಹಿಡಿದರೆ ಸಿಎಂ ಸಿದ್ದರಾಮಯ್ಯಗೆ ದೊಡ್ಡ ಗೆಲುವು ಆಗಲಿದೆ. ಬಿ ರಿಪೋರ್ಟ್ ತಿರಸ್ಕರಿಸಿದರೆ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.