ಚಿತ್ರದುರ್ಗ : ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆಯಂತೆ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿರುವ ಮತ್ತು ಇದುವರೆವಿಗೂ ಇ-ಆಸ್ತಿ ನಮೂನೆ-3 ಅನ್ನು ಪಡೆಯದಿರುವ ಸ್ವತ್ತುಗಳಿಗೆ ಸಂಬಂಧಪಟ್ಟಂತೆ “ಬಿ”-ಖಾತೆ ನೀಡಲಾಗುತ್ತಿದ್ದು, ಸಂಬಂಧಪಟ್ಟವರು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
“ಬಿ” ರಿಜಿಸ್ಟರ್‍ನಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಖಾತಾ ಪಡೆಯಲು ನೀಡಬೇಕಾದ ದಾಖಲೆಗಳ ವಿವರ ಇಂತಿದೆ. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ 2024 ರ ಸೆಪ್ಟಂಬರ್ 10 ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರ ಅಥವಾ ಕ್ರಯ ಪತ್ರ ಅಥವಾ ವಿಭಾಗ ಪತ್ರ ಅಥವಾ ಹಕ್ಕು ಖುಲಾಸೆ ಪತ್ರಗಳು. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ (ನಮೂನೆ-15 ಇ.ಸಿ), ಚಾಲ್ತಿ ಸಾಲಿನ ಆಸ್ತಿ ತೆರಿಗೆ ಮತ್ತು ಪಾವತಿ ರಸೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ (ಮತದಾರರ ಗುರುತಿನ ಚೀಟಿ/ ಪಾನ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಪಡಿತರ ಚೀಟಿ/ ಪಾಸ್‍ಪೋರ್ಟ್.
ಈ ದಾಖಲೆಗಳನ್ನು ಚಿತ್ರದುರ್ಗ ನಗರಸಭೆಗೆ ಸಲ್ಲಿಸಿ “ಬಿ” ಖಾತಾ ಪಡೆಯಲು ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರುಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ, ವಾಟ್ಸಾಪ್ ನಂ. 9606281164 ಅಥವಾ ಕಚೇರಿ ವೇಳೆಯಲ್ಲಿ ಕಂದಾಯ ವಿಭಾಗದ ಕರವಸೂಲಿಗಾರರು, ಕಂದಾಯ ನಿರೀಕ್ಷಕರು, ಕಂದಾಯಾಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಎಂ. ರೇಣುಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.