ಬೆಂಗಳೂರು : ಡಿಕೆ ಸುರೇಶ್, ಡಿಕೆ ಶಿವಕುಮಾರ್ ಅವರ ಕಡೆಯವರಿಂದ ನನ್ನ ಮೇಲೆ ಆಸೀಡ್ ದಾಳಿ ನಡೆದಿದೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಡಿಕೆ ಬ್ರದರ್ಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ನನ್ನ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಮೊಟ್ಟೆಯ ಒಳಗಡೆ ಆಸಿಡ್ ಹಾಕಿ ದಾಳಿ ಮಾಡಿದ್ದಾರೆ. ಗುಂಪು ದಾಳಿ ಮಾಡಿ ನನ್ನ ಕೊಲೆ ಮಾಡಲು ಮುಂದಾಗಿದ್ದಾರೆ. ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.
ಡಿಕೆ ಸುರೇಶ್, ಡಿಕೆ ಶಿವಕುಮಾರ್, ಕುಸುಮ ತಂದೆ ಹನುಮಂತರಾಯಪ್ಪ ನನ್ನ ಮೇಲಿನ ದಾಳಿಗೆ ನೇರ ಹೊಣೆ. ಇದು ಕಾಂಗ್ರೆಸ್ ಪ್ರೇರಿತ ಕೃತ್ಯವಾಗಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರು ಮನೆಯ ಮುಂದೆಯೇ ಬಂದು ರಾಜೀನಾಮೆ ಕೊಡಿ. ಇಲ್ಲದೇ ಇದ್ದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂಬುವುದಾಗಿ ಶಾಸಕ ಮುನಿರತ್ನ ತಿಳಿಸಿದ್ದಾರೆ.
ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ 100 ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಾಗ ಮುನಿರತ್ನ ಮೇಲೆ ಕಲ್ಲು ಮತ್ತು ಮೊಟ್ಟೆ ದಾಳಿ ನಡೆದಿದೆ. ಕಾರಿನ ಗಾಜಿನ ಮೇಲೆಯೇ ಕಲ್ಲು ಬಿದ್ದಿದ್ದು, ಕೂಡಲೇ ಪೊಲೀಸರು ಮೊಟ್ಟೆ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ದಾಳಿಯ ಬಳಿಕ ಶಾಸಕ ಮುನಿರತ್ನ ಡಿಕೆ ಸುರೇಶ್, ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.