ಹೊಳಲ್ಕೆರೆ : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾಗಿದ್ದರೂ ಹೊಳಲ್ಕೆರೆಯಲ್ಲಿ ಒಳ್ಳೆಯ ಟಾರ್ ರಸ್ತೆಯಿರಲಿಲ್ಲ. ಎಷ್ಟು ಎಂ.ಎಲ್.ಎ.ಗಳು ಬಂದು ಹೋಗಿದ್ದಾರೆ ಯಾರ್ಯಾರೂ ಏನು ಮಾಡಿದ್ದಾರೆಂದು ಆಲೋಚನೆ ಮಾಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಜನತೆಯನ್ನು ಎಚ್ಚರಿಸಿದರು.
ಗುಂಜಿಗನೂರು ಗ್ರಾಮದಲ್ಲಿ ಮೂರು ಕೋಟಿ ರೂ.ವೆಚ್ಚದಲ್ಲಿ ಎರಡು ಕೆರೆ ಅಭಿವೃದ್ದಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹೊಳಲ್ಕೆರೆಯಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ವೈದ್ಯರು ಇಲ್ಲಿಯೇ ತಂಗಬೇಕೆನ್ನುವ ಕಾರಣಕ್ಕಾಗಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಉತ್ತಮ ಗುಣಮಟ್ಟದ ಶಾಲಾ-ಕಾಲೇಜು, ಡಿಪ್ಲಮೋ, ಐ.ಟಿ.ಐ. ಪಾಲಿಟೆಕ್ನಿಕ್, ಪದವಿ ಕಾಲೇಜುಗಳನ್ನು ಕಟ್ಟಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿದ್ದೇನೆ. ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಎಲ್ಲಿ ಏನು ಅಭಿವೃದ್ದಿ ಕೆಲಸ ಮಾಡಿದರೆ ಜನತೆಗೆ ಒಳ್ಳೆಯದಾಗುತ್ತದೆಂಬ ಅರಿವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆಂದರು.
ಹಾಲಿದ್ದಾಗ ಹಬ್ಬ ಮಾಡು, ಅಧಿಕಾರವಿದ್ದಾಗ ಕೆಲಸ ಮಾಡು ಎನ್ನುವುದನ್ನು ಹಿರಿಯರು ಹೇಳಿಕೊಟ್ಟಿದ್ದಾರೆ. ಅದರಂತೆ ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. 365 ದಿನವೂ ಕೆಲಸ ಮಾಡುವಷ್ಟು ಅನುದಾನ ತರುವ ಯೋಗ್ಯತೆಯಿಟ್ಟುಕೊಂಡಿದ್ದೇನೆ. ದೊಡ್ಡ ದೊಡ್ಡ ಕೆರೆ ಕಟ್ಟೆ, ಚೆಕ್ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಚಿಕ್ಕಜಾಜೂರು ಸಮೀಪವಿರುವ ಕೋಟೆಹಾಳ್ ಬಳಿ ಐದುನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಜೋಗ್ಫಾಲ್ಸ್ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದೆ. ಈ ಕಾಮಗಾರಿ ಪೂರ್ಣಗೊಂಡರೆ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆಯಿರುವುದಿಲ್ಲ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತರಲು 367 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇನೆ. ನೀರಿನ ಮಧ್ಯೆ ನಲವತ್ತು ಅಡಿ ಆಳದಿಂದ ಪಿಲ್ಲರ್ ಎತ್ತಿ ಟ್ಯಾಂಕ್ ಕಟ್ಟಿ ಮೋಟಾರ್ ಕೂರಿಸಲಾಗುವುದು. ಎತ್ತಿನಹೊಳ್ಳೆ ಹಾಗೂ ಭದ್ರಾ ಡ್ಯಾಂನಿಂದ ಇಲ್ಲಿಗೆ ನೀರು ಹರಿಯುವುದರಿಂದ ಎಂತಹ ಬೇಸಿಗೆಯಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲ. ಬಡವರಿಗೆ ನಿವೇಶನಗಳನ್ನು ನೀಡಿ ಮನೆ ಕಟ್ಟಿಸಿಕೊಳ್ಳಲು ಒಬ್ಬರಿಗೆ ಏಳು ಲಕ್ಷ ರೂ.ಗಳನ್ನು ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷೆ ದೇವಮ್ಮ, ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ಸದಸ್ಯರುಗಳಾದ ಆನಂದಪ್ಪ, ಜಗದೀಶ್, ನಾಗೇಂದ್ರಪ್ಪ, ರುದ್ರೆಗೌಡ್ರು, ಗಂಗಾಧರಪ್ಪ, ಲವಕುಮಾರ್, ಜಯಪ್ಪ, ವೀಣ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.