ಹೊಳಲ್ಕೆರೆ : ಕ್ಷೇತ್ರದ ಯಜಮಾನ ಆದವನಿಗೆ ಎಲ್ಲರ ಹಿತ ಕಾಯುವ ಯೋಗ್ಯತೆಯಿರಬೇಕು. 31 ವರ್ಷಗಳ ಹಿಂದೆ ಭರಮಸಾಗರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ ಶಾಸಕನಾದವನು. ಸರ್ಕಾರ ಯಾವುದೇ ಇರಲಿ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ದಿಪಡಿಸುವುದೇ ನನ್ನ ಆಧ್ಯತೆ. ಈ ಕ್ಷೇತ್ರದಿಂದ ಗೆದ್ದು ಮಂತ್ರಿಯಾಗಿದ್ದವರು ಏನು ಮಾಡಿದರು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಜನತೆಯನ್ನು ಪ್ರಶ್ನಿಸಿದರು.?
ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ 3.5 ಕೋಟಿ ರೂ.ವೆಚ್ಚದಲ್ಲಿ ನೂತನ ಬ್ರಿಡ್ಜ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಶಾಲಾ ಕಟ್ಟಡ, ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ವಿರೋಧ ಪಕ್ಷದ ಶಾಸಕನಾಗಿ ಅನುದಾನ ತಂದು ದಿನನಿತ್ಯವೂ ತಾಲ್ಲೂಕಿನಲ್ಲಿರುವ ಎಲ್ಲಾ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸುತ್ತಿದ್ದೇನೆ. ಅಧಿಕಾರ ಮುಖ್ಯವಲ್ಲ. ದಕ್ಷತೆಯಿಂದ ಕೆಲಸ ಮಾಡುವ ಬದ್ದತೆಯಿಟ್ಟುಕೊಂಡಿರುವ ರಾಜಕಾರಣಿ ನಾನು. ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಸಿ.ಸಿ.ರಸ್ತೆ ಮಾಡಿಸಿದ್ದೇನೆ. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಹಳ್ಳಿಗಳಲ್ಲಿ ಮನೆ ಮನೆಗೆ ಪೂರೈಸುವುದಕ್ಕಾಗಿ
367 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಇನ್ನು ಎರಡು ಮೂರು ತಿಂಗಳಲ್ಲಿ ನೀರು ಕೊಡಲಾಗುತ್ತದೆ ಎಂದು ಹೇಳಿದರು.
ಹೊಳಲ್ಕೆರೆ ಚಿಕ್ಕಕೆರೆಗೆ ನೀರು ತುಂಬಿಸುವುದಕ್ಕಾಗಿ ಇನ್ನೂರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ರೈತರ ತೋಟಗಳು ಒಣಗಬಾರದೆಂದು ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಐದು ನೂರು ಕೋಟಿ ರೂ.ಗಳ ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಇದರಿಂದ ಇನ್ನು ನೂರು ವರ್ಷಗಳ ಕಾಲ ರೈತರಿಗೆ ಕರೆಂಟ್ ಸಮಸ್ಯೆಯಾಗುವುದಿಲ್ಲ. ತಾಲ್ಲೂಕಿನಾದ್ಯಂತ ಸಿ.ಸಿ.ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ ನಿರ್ಮಾಣ, ಕೆರೆ ಕಟ್ಟೆ, ಚೆಕ್ಡ್ಯಾಂಗಳನ್ನು ಕಟ್ಟಲಾಗಿದೆ. ಯಾರಿಂದ ಏನನ್ನು ಹೇಳಿಸಿಕೊಂಡು ಕೆಲಸ ಮಾಡುವ ರಾಜಕಾರಣಿ ನಾನಲ್ಲ ಎಂದರು.
ಎಲ್ಲಿ ಏನು ಅವಶ್ಯಕತೆಯಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ. ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುತ್ತೇನೆ. ಯಾರ ಮೇಲೂ ಅಟ್ರಾಸಿಟಿ ಕೇಸು ಹಾಕಿಸಿಲ್ಲ. ನೀಯತ್ತಾಗಿ ನಿಮ್ಮ ಕೆಲಸ ಮಾಡುವವರು ಯಾರು ಎನ್ನುವುದನ್ನು ಅರಿತು ಚುನಾವಣೆಯಲ್ಲಿ ಓಟು ಹಾಕಿ ಎಂದು ಜನತೆಯಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಾಂಬಾಳಿಮಠ್ ತಾಲ್ಲೂಕು ಆರೋಗ್ಯಾಧಿಕಾರಿ ರೇಖಾ, ಪ್ರಸನ್ನಕುಮಾರ್, ವೀರಭದ್ರಪ್ಪ, ಪರಮೇಶಣ್ಣ, ಶೇಖಣ್ಣ,
ಪ್ರವೀಣ್ಕುಮಾರ್, ಉಮೇಶಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಲೇಶ್, ಅಂಕಳಪ್ಪ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.