ಚಿತ್ರದುರ್ಗ: ಚಿತ್ರದುರ್ಗ ನಗರವನ್ನು ಅಭಿವೃದ್ಧಿ ನಗರವನ್ನಾಗಿ ಮಾಡಲು ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿ ಭೂಮಿ ಪೂಜೆಯನ್ನು ಮಾಡಲಾಗಿದೆ ಎಂದು ಶಾಸಕ ಕೆ ಸಿ ವೀರೇಂದ್ರ ಪಪ್ಪಿ ತಿಳಿಸಿದರು.
ನಗರದ ವಿವಿಧ ವಾರ್ಡುಗಳಲ್ಲಿ ಭಾನುವಾರ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಹಿಂದೆ ಚಿತ್ರದುರ್ಗ ಹೇಗೆ ಇತ್ತು ಅನ್ನುವುದು ಮುಖ್ಯ ಅಲ್ಲ, ಮುಂದೆ ಹೇಗೆ ಅಭಿವೃದ್ಧಿ ಕೆಲಸಗಳ ಮೂಲಕ ಚಿತ್ರದುರ್ಗ ಅಭಿವೃದ್ಧಿಯಾಗುತ್ತದೆ ಎಂಬುದು ಮುಖ್ಯ, ಹಾಗಾಗಿ ಚಿತ್ರದುರ್ಗ ನಗರದ ಎಲ್ಲಾ ವಾರ್ಡಗಳಲ್ಲಿ ಈಗಾಗಲೇ ಸಾಕಷ್ಟು ಭೂಮಿ ಪೂಜೆಗಳನ್ನು ಈ ಹಿಂದೆ ಮಾಡಲಾಗಿದೆ ಅದೇ ರೀತಿ ವಿವಿಧ ಇಲಾಖೆಗಳೊಂದಿಗೆ ಸೇರಿ ಅಭಿವೃದ್ಧಿ ಕೆಲಸಗಳಿಗೆ ಭೂಮಿ ಪೂಜೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಭೇಟಿ ನೀಡಿ ಭೂಮಿ ಪೂಜೆ ಮಾಡುವುದರ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಕಾಮಗಾರಿಗಳು ಗುಣಮಟ್ಟದಿಂದ ಇರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅದೇ ರೀತಿಯಲ್ಲಿ ಅಧಿಕಾರಿಗಳು ಸಹ ಗ್ರಾಮೀಣ ಭಾಗಗಳಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಚಂದ್ರವಳ್ಳಿ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿರ್ಮಿತಿ ಕೇಂದ್ರ ಇಲಾಖೆ ವತಿಯಿಂದ ರಾಜ್ಯ ವಿಪತ್ತು ಉಪಶಮನ (ಡಿಎಂಎಫ್) ನಿಧಿಯಡಿ ರಾಜ ಕಾಲುವೆ ಅಭಿವೃದ್ಧಿ ಕಾಮಗಾರಿ, ಬರಗೆರಮ್ಮ ದೇವಸ್ಥಾನದ ಸೇತುವೆ ಬಳಿ ರಾಜಕಾಲುವೆಗೆ ಸಿಸಿ ಡ್ರೈನ್ ಕಾಮಗಾರಿ, ಸಿಹಿ ನೀರು ಹೊಂಡದ ಅಭಿವೃದ್ಧಿ ಕಾಮಗಾರಿ, ಸಂತೆಹೊಂಡಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ, ತುರುವನೂರು ರಸ್ತೆಯಲ್ಲಿನ ವೆಂಕಟರಮಣ ಸ್ವಾಮಿ ದೇವಸ್ಥಾನದ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ, ಸ್ಟೇಡಿಯಂ ರಸ್ತೆಯನ ಒಂದನೇ ಕ್ರಾಸ್ ನಲ್ಲಿ ರಾಜ ಕಾಲುವೆ ಸಿಸಿ ಡ್ರೈನ್ ಕಾಮಗಾರಿಗಳ ಭೂಮಿ ಪೂಜೆಯನ್ನ ಶಾಸಕ ಕೆ.ಸಿ ವಿರೇಂದ್ರ ಪಪ್ಪಿ ಅವರು ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರಾದ ಮಂಜಪ್ಪ, ಸಿದ್ದವ್ವನಹಳ್ಳಿ ಪರಮೇಶಿ, ಬ್ಲಾಕ್ ಅಧ್ಯಕ್ಷ ಲಕ್ಷ್ಮೀಕಾಂತ ವೀರಶೈವ ಸಮಾಜದ ಮುಖಂಡ ಕಾರ್ತಿಕ್, ನಗರಸಭೆಯ ಮಾಜಿ ಸದಸ್ಯ ಶ್ರೀ ರಾಮ್,ಮರುಳಾರಾಧ್ಯ ಪ್ರಕಾಶ್, ನಗರಸಭಾ ಸದಸ್ಯರಾದ ಮಹಮ್ಮದ್ ಆಹಮ್ಮದ್ ಪಾಷ (ಸರ್ದಾರ್,) ಸೇರಿದಂತೆ ಇತರರು ಭಾಗವಹಿಸಿದ್ದರು.