ಬ್ಯಾಂಕಾಕ್: ನಿನ್ನೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದೆ ಮಾರಣಾಂತಿಕ ಭೂಕಂಪದಲ್ಲಿ ಸಾವಿನ ಸಂಖ್ಯೆ 700 ರ ಗಡಿದಾಟಿದೆ. ನೂರಾರು ಮಂದಿ ಅವಶೇಷಗಳಡಿ ನಾಪತ್ತೆಯಾಗಿದ್ದು ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಮ್ಯಾನ್ಮಾರ್ ಮತ್ತು ನೆರೆಯ ಥಾಯ್ಲೆಂಡ್‌ನಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕಟ್ಟಡಗಳು, ಸೇತುವೆ ಮತ್ತು ಅಣೆಕಟ್ಟುಗಳು ನಾಶಗೊಂಡಿವೆ. ಮ್ಯಾನ್ಮಾರ್‌ನಲ್ಲಿ ಇನ್ನು ಮ್ಯಾನ್ಮಾರ್‌ನಲ್ಲಿ ವಿನಾಶ ಉಂಟಾದ ಪ್ರದೇಶದಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ಮ್ಯಾನ್ಮಾರ್ ಸರ್ಕಾರ ತಿಳಿಸಿದೆ. ಭೂಕಂಪದ ಹಿನ್ನೆಲೆ ಜುಂಟಾ ಸರ್ಕಾರ ಅಂತಾರಾಷ್ಟ್ರೀಯ ಸಹಾಯ ಕೋರಿದೆ. ಪತಿಹಾರ ಕಾರ್ಯಗಳನ್ನು ಪ್ರಾರಂಭಿಸಲು ವಿಶ್ವಸಂಸ್ಥೆ 5 ಮಿಲಿಯನ್ ಡಾಲರ್ ನಿಗದಿಪಡಿಸಿದೆ. ಭಾರತದ ರಾಷ್ಟ್ರೀಯ ಭೂಕಂಪ ಇಲಾಖೆಯ ಪ್ರಕಾರ ಮ್ಯಾನ್ಮಾರ್‌ನ ಮಂಡಲೆ ನಗರದ ಬಳಿ 10 ಕಿ.ಮೀ. ಆಳದಲ್ಲಿ ಬೆಳಿಗ್ಗೆ 11.50ರ ಸುಮಾರಿಗೆ ಮೊದಲ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ 7.7ರಷ್ಟಿದ್ದು, ಮ್ಯಾನ್ಮಾರ್ ಮತ್ತು ಬ್ಯಾಂಕಾಕ್‌ಗಳಲ್ಲಿ ಭಾರಿ ಅನಾಹುತಕ್ಕೆ ಇದು ಕಾರಣವಾಗಿದೆ. ಇದಾದ ಬಳಿಕ ಇದೇ ಪ್ರದೇಶದಲ್ಲಿ 12.02ಕ್ಕೆ 7 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಇದಾದ ಬಳಿಕ 12.57ಕ್ಕೆ 5, 1.07ಕ್ಕೆ 4.9, 2.48ಕ್ಕೆ 4.4 ಮತ್ತು 3.25ಕ್ಕೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಥಾಯ್ಲೆಂಡ್‌ನಲ್ಲಿ ತುರ್ತು ಪರಿಸ್ಥಿತಿ: ಭಾರೀ ಭೂಕಂಪ ದಿಂದಾಗಿ ಥಾಯ್ಲೆಂಡ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಮ್ಯಾನ್ಮಾರ್ ರಾಜಧಾನಿ ನೈಫಾಯಿತಾ ಸಹಿತ ವಿವಿಧೆಡೆ ಹಲವು ಕಟ್ಟಡಗಳು, ಮನೆಗಳು, ಸೇತುವೆಗಳು ನೆಲಸಮಗೊಂಡಿವೆ.
