ಬೆಂಗಳೂರು :ರಾಜ್ಯದ ಕಾಂಗ್ರೆಸ್ ಸರಕಾರವು ನಕ್ಸಲೀಯರಿಗೆ ರಾಜಾತಿಥ್ಯ ನೀಡಿ ಶರಣಾಗತಿ ಮಾಡಿಸಿದ್ದು ಎಷ್ಟು ಸರಿ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.
ನಕ್ಸಲೀಯರು ಕರ್ನಾಟಕ ರಾಜ್ಯದಿಂದ ಸಂಪೂರ್ಣ ಶರಣಾಗತಿ ಆಗುತ್ತಿದ್ದರೆ ಮತ್ತು ಅವರ ಸಮಸ್ಯೆ ಪರಿಹಾರ ಆಗುತ್ತಿದ್ದರೆ ಅದು ಒಳ್ಳೆಯ ವಿಷಯ. ಆದರೆ, ಮುಖ್ಯಮಂತ್ರಿಗಳು ಅವರನ್ನು ಶರಣಾಗುವಂತೆ ಮಾಡಿಕೊಳ್ಳಬೇಕಿತ್ತೇ? ಸಿಎಂ ಕಚೇರಿಯಲ್ಲಿ ಬಂದು ಶರಣಾಗುವುದು ಎಷ್ಟು ಸರಿ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳ ಉಪಸ್ಥಿತಿ, ಸಿಎಂ ಗೃಹ ಕಚೇರಿ ಬಳಕೆ, ಪೊಲೀಸ್ ಇಲಾಖೆ ಉಪಸ್ಥಿತಿ, ಜೊತೆಗೇ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಟ್ಟು ಶರಣಾಗತಿ ಕಾರ್ಯಕ್ರಮ ನಡೆಸುವುದು ಎಷ್ಟು ಸರಿ ಎಂದು ಅವರು ಕೇಳಿದ್ದಾರೆ.
ನಕ್ಸಲೀಯರನ್ನು ಪೊಲೀಸ್ ಇಲಾಖೆ ಮುಂದೆ ಶರಣಾಗುವಂತೆ ಸೂಚಿಸಲು ಅವಕಾಶವಿತ್ತು. ಆದರೆ, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಸೇರಿ ಶರಣಾಗುವಂತೆ ಮಾಡಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಅವರಿಗೆ ಜನಬೆಂಬಲ ಇಲ್ಲ ಎಂಬುದು ಗೊತ್ತಾಗಿದೆ. ಮೃತ ಪೊಲೀಸರ, ಜನಸಾಮಾನ್ಯರ ಜೀವನದ ಕುರಿತು ಸರಕಾರ ಯೋಚಿಸಿದೆಯೇ? ಎಂದೂ ಅವರು ಕೇಳಿದ್ದಾರೆ.
ಅವರಿಗೆ ಪ್ಯಾಕೇಜ್ ಕೊಡುವುದು ಎಷ್ಟು ಸಮಂಜಸ? ಜೀವನಕ್ಕೆ ಆಧಾರ ಆಗಬೇಕೆಂಬ ವಿಷಯ ಇದ್ದರೂ ಅದು ಸರಿಯೇ? ಇದುವರೆಗೆ ಆಗಿರುವ ಎಲ್ಲ ಪ್ರಕರಣಗಳನ್ನೂ ರದ್ದು ಮಾಡುವಿರಾ? ಕೆಲವರ ಮೇಲೆ 15 ಕೇಸಿದ್ದರೆ, ಇನ್ನೂ ಹಲವರ ಮೇಲೆ 10, 5 ಕೇಸುಗಳಿವೆ. ಅನೇಕರು ಪೊಲೀಸರನ್ನು ಹತ್ಯೆ ಮಾಡಿದ್ದರೆ, ಇನ್ನೂ ಹಲವರು ಜನರನ್ನೇ ಕೊಂದಿದ್ದಾರೆ.
ಲೂಟಿ ಪ್ರಕರಣಗಳೂ ಇವೆ ಎಂದು ಅವರು ಗಮನ ಸೆಳೆದಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ಮಾಡುತ್ತಿರುವುದು ಸರಿಯಲ್ಲ ಎಂದಿರುವ ಅವರು ಇವರು 6 ಜನ ಕೊನೆಯವರು ಎಂದು ಸರಕಾರ ಹೇಳಿದೆ. ಇದಕ್ಕೆ ಏನಾದರೂ ಸಾಕ್ಷ್ಯಾಧಾರ ಇದೆಯೇ? ಎಂದಿದ್ದಾರೆ. ಬೇರೆಯವರು ಇದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ತಿಳಿಸಿದ್ದಾರೆ. ಪ್ಯಾಕೇಜ್ ಕೊಡುವ ಕುರಿತು ಮರುಪರಿಶೀಲನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.