ದಾವಣಗೆರೆ: ಬೆಂಗಳೂರಿನಿಂದ ಲೋಕಾಯುಕ್ತ ಅಧಿಕಾರಿಗಳ ತಂಡವನ್ನು ಕರೆದುಕೊಂಡು ಸ್ವಂತ ವಾಹನದಲ್ಲಿ ದಾವಣಗೆರೆ ಜಿಲ್ಲೆಗೆ ಆಗಮಿಸಿದ್ದೇನೆ. ಅಧಿಕಾರಿಗಳು ನೀಡುವ ಆತಿಥ್ಯ ಸ್ವೀಕರಿಸಲು ಜಿಲ್ಲೆಗೆ ಆಗಮಿಸಿಲ್ಲ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.
ಶಿಷ್ಟಾಚಾರದ ಅನುಸಾರ ಅಧಿಕಾರಿಗಳು ಭದ್ರತೆ ನೀಡಿದ್ದಾರೆ. ಲೋಕಾಯುಕ್ತದಲ್ಲಿ ಕೆಲಸ ಮಾಡುವ ನಮಗೆ ಜೀವ ಬೆದರಿಕೆಯೂ ಇದೆ. ನಗರದ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿ.ಪಂ.ಸಿಇಓ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಭದ್ರತಾ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ವಾಹನಗಳಲ್ಲಿ ಸಂಚರಿಸಿದ್ದಾರೆ ಎಂದರು.
64 ವರ್ಷದ ನಾನು ನಡೆದುಕೊಂಡು ಕಚೇರಿಗಳಿಗೆ ಭೇಟಿ ನೀಡುವುದು ಸಾಧ್ಯವಿಲ್ಲ. ಹಾಗಾಗಿ ವಾಹನ ಬಳಿಸಿ ಸಂಚರಿಸಿದ್ದೇನೆ. ಇದು ದುಂದುವೆಚ್ಚ ಆಡಂಬರದ ವಿಷಯವಲ್ಲ. ಯಾವುದೇ ಕಚೇರಿ ಭೇಟಿಯ ವೇಳೆ ಅಧಿಕಾರಿಗಳು ನೀಡುವ ನೀರನ್ನು ಸಹ ಕುಡಿಯದೇ, ಪರಿಶೀಲನೆ ನಡೆಸಿದ್ದೇನೆ. ಅಕ್ರಮಗಳನ್ನು ಕಂಡು ಬಂದಲ್ಲಿ ಮುಲಾಜು ಇಲ್ಲದೇ ಸ್ವಂ ಪ್ರೇರಿತ ಪ್ರಕರಣ ದಾಖಲಿಸಿದ್ದೇನೆ. ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.